ಕಾಪು : ವಿಧಾನಸಭಾ ಚುನಾವಣೆಗೆ ಮಂಗಳವಾರ ರಾತ್ರಿ ಬಿಜೆಪಿ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಟಿಕೆಟ್ ವಂಚಿತ ಶಾಸಕರು ಬೆಂಬಲಿಗರು ಮತ್ತು ಕಾರ್ಯಕರ್ತರ ಜತೆ ಬಂಡಾಯದ ಚಿಂತನೆಯಲ್ಲಿ ಮುಳುಗಿದ್ದರೆ, ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕಾಪುವಿನ ಖಾಸಗಿ ಹೊಟೇಲ್‌ನಲ್ಲಿ ಪಕ್ಷ ಸಂಘಟನೆಯ ಚರ್ಚೆಯಲ್ಲಿ ಮುಳುಗಿದ್ದರು.
ಪಕ್ಷದ ಚುನಾವಣ ಜಿಲ್ಲಾ ಪ್ರಭಾರಿ, ದಿಲ್ಲಿ ಶಾಸಕ ವಿಜೇಂದ್ರ ಗುಪ್ತ ಅವರು ಲಾಲಾಜಿ ಹಾಗೂ ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್ ಅವರ ಜತೆಗೆ ಪಕ್ಷ ಸಂಘಟನೆ, ಚುನಾವಣ ಸಿದ್ಧತೆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅಷ್ಟರಲ್ಲಿ ಅಭ್ಯರ್ಥಿಗಳ ಘೋಷಣೆಯಾದಾಗ ಲಾಲಾಜಿ ಅವರ ಹೆಸರಿರಲಿಲ್ಲ. ಆಗ ಸ್ವತಃ ಪ್ರಭಾರಿಯವರೇ ಲಾಲಾಜಿ ಆರ್. ಮೆಂಡನ್ ಅವರನ್ನು ಸಂತೈಸಿದರು. ಆಗ ತಮ್ಮ ರಾಜಕೀಯ ಅನುಭವ ಮತ್ತು ಪಕ್ಷ ನೀಡಿದ ಅವಕಾಶಗಳ ಕುರಿತೂ ಲಾಲಾಜಿ ಹಂಚಿಕೊಂಡಾಗ, ಭವಿಷ್ಯದಲ್ಲಿ ಮತ್ತಷ್ಟು ಅವಕಾಶಗಳು ಸಿಗಲಿವೆ ಎಂದು ಗುಪ್ತ ಭರವಸೆ ನೀಡಿದರು. ಸಾಂತ್ವನದ ಮಾತುಗಳಿಂದ ಸಮಾಧಾನಚಿತ್ತರಾಗಿ ಎಲ್ಲರೊಡನೆ ಭೋಜನ ಸವಿದು ಮನೆಗೆ ವಾಪಸಾದರು. ಬುಧವಾರ ಬೆಳಗ್ಗೆ ಮನೆಗೆ ಆಗಮಿಸಿದ ತನ್ನ ಉತ್ತರಾಧಿಕಾರಿ ಪಕ್ಷದ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಪಕ್ಷದ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.