ವಿಧಾನ ಸಭಾ ಚುನಾವಣೆ 2023 : ಉಡುಪಿ ಜಿಲ್ಲೆಯಲ್ಲಿ ರಂಗೇರಿದ ಚುನಾವಣಾ ಕಣ

ಉಡುಪಿ: ಜಿಲ್ಲಾ ಬಿಜೆಪಿಯಿಂದ ಅಸಮಾಧಾನಿತರನ್ನು ಸಮಾಧಾನಪಡಿಸುವ ಕಾರ್ಯ ಬಹುತೇಕ ಯಶ ಕಂಡುಕೊಳ್ಳುತ್ತಿದ್ದು, ಕಾಂಗ್ರೆಸ್‌ಗೆ ಉಡುಪಿ ವಿಧಾನಸಭಾ ಕ್ಷೇತ್ರ ಮಗ್ಗುಲ ಮುಳ್ಳಾಗುತ್ತಿದೆ. ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌ ಅವರು ಕಾಂಗ್ರೆಸ್‌ ಟಿಕೆಟ್‌ ಆಂಕಾಕ್ಷಿ ಕೃಷ್ಣಮೂರ್ತಿ ಆಚಾರ್ಯ ಜತೆ ಮಾತುಕತೆ ನಡೆಸಿದರೂ ಪೂರ್ಣ ಪ್ರಯೋಜನವಾಗಿಲ್ಲ ಎನ್ನಲಾಗಿದೆ.

ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗುರುವಾರ ಎರಡೂ ಪಕ್ಷದಿಂದಲೂ ಬಿರುಸಿನ ಚಟುವಟಿಕೆಗಳು ನಡೆದಿವೆ. ಬಿ.ಕೆ. ಹರಿಪ್ರಸಾದ್‌ ಅವರು ಕ್ಷೇತ್ರದ ಏಳು ಮಂದಿ ಆಕಾಂಕ್ಷಿಗಳು ಸಹಿತವಾಗಿ ಅಭ್ಯರ್ಥಿಯೊಂದಿಗೆ ಮಾತುಕತೆ ನಡೆಸಿದರು. ಜತೆಗೆ ಜಿಲ್ಲಾಧ್ಯಕ್ಷರೊಂದಿಗೆ ವಿಶೇಷ ಚರ್ಚೆ ನಡೆಸಿ, ಮಾಹಿತಿ ಸಂಗ್ರಹಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್‌ ನಾಯಕ್‌ ನೇತೃತ್ವದಲ್ಲಿ ಪದಾಧಿಕಾರಿಗಳ ಸಭೆ ನಡೆಯಿತು. ಬುಧವಾರ ಮುನಿಸಿಕೊಂಡಿದ್ದ ಶಾಸಕ ರಘುಪತಿ ಭಟ್‌ ಗುರುವಾರ ಪಕ್ಷದ ಕಚೇರಿಯಲ್ಲಿ ಅಭ್ಯರ್ಥಿಯೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಶುಕ್ರವಾರದಿಂದ ಅಭ್ಯರ್ಥಿ ಪರ ಪ್ರಚಾರ ಆರಂಭಿಸುವುದಾಗಿ ಘೋಷಿಸಿದರು.

ಈ ಮಧ್ಯೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರುಶನ ಪಡೆದು ವಾಪಸ್‌ ಆದರು. ಈ ಸಂದರ್ಭದಲ್ಲಿ ದೇಗುಲದಲ್ಲಿ ಮುಖ್ಯಮಂತ್ರಿ ಹಾಗೂ ನಟ ರಿಷಬ್‌ ಶೆಟ್ಟಿಯವರ ಮುಖಾಮುಖೀಯೂ ನಡೆಯಿತು.

ಕಾಪು
ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಗಳ ಚುನಾವಣೆ ತಯಾರಿ ಚುರುಕುಗೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಅವರು ಕಾಪು ಕಾಂಗ್ರೆಸ್‌ ಭವನದಲ್ಲಿ ಗಣಪತಿ ಹೋಮ ನಡೆಸಿ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದರು. ಬಿಜೆಪಿ ಅಭ್ಯರ್ಥಿ ಸುರೇಶ್‌ ಶೆಟ್ಟಿ ಗುರ್ಮೆ ಅವರು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರೊಂದಿಗೆ ಸೇರಿ ಕಾರ್ಯಕರ್ತರೊಂದಿಗೆ ವಿವಿಧೆಡೆ ಸಭೆ ನಡೆಸಿದರು. ಬಿಜೆಪಿ ವತಿಯಿಂದ ಕಾಪುವಿನಲ್ಲಿ ತಾತ್ಕಾಲಿಕ ಚುನಾವಣೆ ಕಚೇರಿ ಆರಂಭಿಸಲು ಸಿದ್ಧತೆ ನಡೆಯಿತು. ಜೆಡಿಎಸ್‌ ಪಕ್ಷ ಜಿಲ್ಲಾಧ್ಯಕ್ಷ ಯೋಗೀಶ್‌ ಶೆಟ್ಟಿ ಅವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆದವು.

ಬೈಂದೂರು
ಬೈಂದೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರುರಾಜ ಗಂಟಿಹೊಳೆ ಅವರ ಘೋಷಣೆಯ ಅನಂತರ ಸ್ವಲ್ಪ ಮಟ್ಟಿನ ಅಸಮಾಧಾನ ಹೊಗೆಯಾಡಿತ್ತು. ಅದನ್ನು ಭಾಗಶಃ ಶಮನ ಮಾಡುವ ಕಾರ್ಯ ನಡೆದಿದೆ. ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್‌ನಿಂದ ಬಿರುಸಿನ ಪ್ರಚಾರ ಕಾರ್ಯ ನಡೆಯುತ್ತಿದೆ. ಬಿಜೆಪಿ ಅಭ್ಯರ್ಥಿ ಗುರುರಾಜ್‌ ಗಂಟಿಹೊಳೆ ಸಂಜೆ ಬೆಂಗಳೂರಿನಿಂದ ಬೈಂದೂರಿಗೆ ಆಗಮಿಸಿದ್ದು, ಪಕ್ಷದ ಕಚೇರಿಗೆ ಭೇಟಿ ನೀಡಿದರು.

ಕಾರ್ಕಳ ಕ್ಷೇತ್ರ
ಕಾರ್ಕಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ವಿ. ಸುನಿಲ್‌ ಕುಮಾರ್‌ ನಾಮಪತ್ರ ಸಲ್ಲಿಸಿದರು. ಎ. 19ರಂದು ಮತ್ತೂಮ್ಮೆ ನಾಮಪತ್ರ ಸಲ್ಲಿಸುವರು. ಕಾರ್ಕಳ ಕ್ಷೇತ್ರದ ಕಾಂಗ್ರೆಸ್‌ ಪಾಳಯ ಅಭ್ಯರ್ಥಿಗಾಗಿ ಕಾಯುತ್ತಿದೆ.

ಕುಂದಾಪುರ
ಕುಂದಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕಿರಣ್‌ ಕುಮಾರ್‌ ಕೊಡ್ಗಿ ಹಾಗೂ ಕಾಂಗ್ರೆಸ್‌ ಅಭ್ಯರ್ಥಿ ದಿನೇಶ್‌ ಹೆಗ್ಡೆ ಮೊಳಹಳ್ಳಿ ನಾಮಪತ್ರ ಸಲ್ಲಿಸಿದರು.

Scroll to Top