ಕುಂದಾಪುರ: ನಾನು ನೂರಕ್ಕೆ ನೂರು ಬಿಜೆಪಿ. ಅದರಲ್ಲಿ ಸಂಶಯವೇ ಬೇಡ. ಅವಕಾಶ ಕೊಡದಿರುವುದಕ್ಕೆ ಬೇಸರವಿಲ್ಲ. ಆದರೆ ಟಿಕೆಟ್ ವಿಷಯದಲ್ಲಿ ಪಕ್ಷವು ನಡೆಸಿಕೊಂಡ ರೀತಿಯ ಬಗ್ಗೆ ಬೇಸರವಿದೆ ಎಂದು ಬೈಂದೂರಿನ ಹಾಲಿ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ನನ್ನದು ವಿರೋಧವೂ ಇಲ್ಲ, ಬಂಡಾಯವೂ ಇಲ್ಲ. ಬೆಂಬಲ ನೀಡುವ ಬಗ್ಗೆ ಕಾರ್ಯಕರ್ತರು, ಹಿತೈಷಿಗಳೊಂದಿಗೆ ಚರ್ಚಿಸಿ ಎರಡು ದಿನದೊಳಗೆ ನಿರ್ಧರಿಸುವೆ ಎಂದರು.
ಟಿಕೆಟ್ ಇಲ್ಲ ಎಂದು 3 ತಿಂಗಳು ಮೊದಲೇ ಹೇಳ ಬಹುದಿತ್ತು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕರೆ ಮಾಡಿ ಬನ್ನಿ ಎಂದಿದ್ದರು. ಬರುವುದಿಲ್ಲ ಅಂದಿದ್ದೇನೆ. ಬಿಎಸ್‌ವೈ ಹಾಗೂ ಸಿಎಂ ಬೊಮ್ಮಾಯಿ ಕರೆ ಮಾಡಿ, ನಾವು ನಿಮ್ಮೊಂದಿಗಿದ್ದೇವೆ. ಟಿಕೆಟಿಗಾಗಿ ನಾವು ಪ್ರಯತ್ನಿಸಿದ್ದು, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದಾರೆ. ಬಂಡಾಯ ಅಭ್ಯರ್ಥಿಯಾಗುವಷ್ಟು ಚಿಲ್ಲರೆ ನಾನಲ್ಲ ಎಂದರು.
ಬೈಂದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಜನಸಾಮಾನ್ಯರ ನೋವಿಗೆ, ಸಂಕಷ್ಟಕ್ಕೆ ಸ್ಪಂದಿಸಿರುವ ತೃಪ್ತಿಯಿದೆ. ಕಾರ್ಯಕರ್ತರ ಪ್ರೀತಿಗೆ ಸದಾ ಋಣಿ. 5 ವರ್ಷ ಕ್ಷೇತ್ರದ ಜನರ ಸೇವೆಯ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯ. ಇಷ್ಟೇ ನನ್ನ ಯೋಗ ಎಂದರು. ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಹಾಗೂ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.
ಬೆಂಬಲಿಗರ ಆಕ್ರೋಶ
ಪತ್ರಿಕಾಗೋಷ್ಠಿ ಬಳಿಕ ಶಾಸಕರ ನಿವಾಸದಲ್ಲಿ ಪ್ರಮುಖ ನಾಯಕರು, ಹಿತೈಷಿಗಳು, ಬೆಂಬಲಿಗರು ಸೇರಿದ್ದರು, ಪಕ್ಷದ ನಡೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಹಾಲಿ ಶಾಸಕರನ್ನು ಕನಿಷ್ಠ ಗೌರವ ಯುತವಾಗಿ ನಡೆಸಿಕೊಳ್ಳುವ ಕೆಲಸವನ್ನು ಮಾಡಿಲ್ಲ ಎನ್ನುವ ಅಸಮಾಧಾನವನ್ನು ವ್ಯಕ್ತಪಡಿಸಿದರು.