ಬಿಜೆಪಿ ವಿರುದ್ಧ ಸಿಡೆದೆದ್ದು ನಿನ್ನೆ ಪಕ್ಷಕ್ಕೆ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಇವತ್ತು ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿ ಬಿಜೆಪಿ ದೊಡ್ಡ ಶಾಕ್ ಕೊಟ್ಟರು. ಲಕ್ಷ್ಮಣ್ ಸವದಿ ಬೆನ್ನಲ್ಲೇ, ಜಗದೀಶ್ ಶೆಟ್ಟರ್ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ. ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಶೆಟ್ಟರ್ಗೆ ಬಿಜೆಪಿ ನಡೆಯಿಂದ ಭಾರೀ ಬೇಸರಗೊಂಡಿದ್ದರು. ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದರೂ ಶೆಟ್ಟರ್ ಹೆಸರು ಇರಲಿಲ್ಲ. ಹೀಗಾಗಿ ಬೇಸರಗೊಂಡು ಬಿಜೆಪಿಯಿಂದ ಶೆಟ್ಟರ್ ಹೊರ ಬಂದಿದ್ದಾರೆ.
ಕಾಂಗ್ರೆಸ್ ಸೇರಿದ ಬೆನ್ನಲ್ಲೇ ಮಾಧ್ಯಮಗಳ ಜೊತೆ ಮಾತನಾಡಿದ ಶೆಟ್ಟರ್, ‘ಇಂದು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದೇನೆ. ಇದು ಬಹಳ ಜನರಿಗೆ ಆಶ್ಚರ್ಯ ಆಗಿದೆ. ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕರಾಗಿದ್ದವರು ಕಾಂಗ್ರೆಸ್ ಸೇರುತ್ತಿದ್ದಾರೆಂದು ಚರ್ಚೆಯಾಗುತ್ತಿದೆ. ಹಲವು ತಿಂಗಳ ಹಿಂದೆಯೇ ತುಂಬಾ ನೋವಾಗಿದೆ. ನಾನು ಬಿಜೆಪಿ ಕಟ್ಟಿ ಬೆಳೆಸಿದ ವ್ಯಕ್ತಿ. ಇಡೀ ರಾಜ್ಯದಲ್ಲಿ ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ ಸಂಘಟಿಸಿದ್ದೆ. ಪಕ್ಷ ನನಗೆ ಎಲ್ಲಾ ಸ್ಥಾನಮಾನ ನೀಡಿದೆ. ಇದನ್ನ ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಆರು ಭಾರಿ ಶಾಸಕನಾಗಿದ್ದ ನನಗೆ ಟಿಕೆಟ್ ನಿರಾಕರಿಸಲಾಗಿದೆ ಎಂದು ಜಗದೀಶ್ ಶೆಟ್ಟರ್ ಬೇಸರ ಹೊರ ಹಾಕಿದ್ದಾರೆ.