ಮಂಗಳೂರು: ಚುನಾವಣೆ ನೆಪದಲ್ಲಿ ಸರಕಾರ ನನ್ನ ಭದ್ರತಾ ಸಿಬಂದಿಯನ್ನು ವಾಪಸ್ ಕರೆಯಿಸಿಕೊಂಡಿದೆ. ನನ್ನದೇನಾದರೂ ಹತ್ಯೆ ನಡೆದರೆ ಅದಕ್ಕೆ ಬಿಜೆಪಿ ರಾಜ್ಯಾಧ್ಯಕ್ಷರು, ಸಂಘ ಪರಿವಾರದ ಪ್ರಮುಖರೇ ಹೊಣೆಯಾಗುತ್ತಾರೆ ಎಂದು ಹಿಂದೂ ಸಂಘಟನೆಯ ಪ್ರಮುಖ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನನಗೆ ಪ್ರಾಣ ಬೆದರಿಕೆ ಇದ್ದುದರಿಂದ ಪೊಲೀಸರೇ ಭದ್ರತಾ ಸಿಬಂದಿ ಒದಗಿಸಿದ್ದರು. ಹದಿನಾರು ವರ್ಷಗಳಿಂದ ಇದ್ದ ಸಿಬಂದಿಯನ್ನು ಈಗ ಚುನಾವಣೆ ನೆಪದಲ್ಲಿ ವಾಪಸ್ ಪಡೆಯಲಾಗಿದೆ. ನನ್ನ ಹತ್ಯೆಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದಾರೆ. ರಿವಾಲ್ವರ್ ಕೂಡ ತೆಗೆದಿಟ್ಟುಕೊಂಡಿದ್ದಾರೆ. ಈ ಬಗ್ಗೆ ಗೃಹ ಸಚಿವರು, ಸಂಘ ಪರಿವಾರದ ಪ್ರಮುಖರಿಗೆ ಹೇಳಿದರೂ ಪ್ರಯೋಜನವಾಗಿಲ್ಲ. ನಾನು ಹಿಂದುತ್ವಕ್ಕಾಗಿ ರಾಷ್ಟ್ರ ಹಿತಕ್ಕಾಗಿ ನಡೆಸಿದ ಕಾರ್ಯಗಳಿಂದಾಗಿ ಬೆದರಿಕೆ ಬಂದಿತ್ತೆ ಹೊರತು ನನ್ನ ವೈಯಕ್ತಿಕ ವಿಷಯಕ್ಕಾಗಿ ಅಲ್ಲ ಎಂದರು.
ನಾನು ಯಾವುದಕ್ಕೂ ಭಯ ಪಡುವವನಲ್ಲ, ವ್ಯವಸ್ಥೆ ವಿರುದ್ದ ಮಾತನಾಡುವ ನನ್ನ ಬಾಯಿ ಮುಚ್ಚಿಸುವ ಪ್ರಯತ್ನವಾಗಿ ಹೀಗೆ ಮಾಡಲಾಗುತ್ತಿದೆ. ಆದರೆ ನಾನು ಹೋರಾಟ ಮುಂದುವರೆಸುತ್ತೇನೆ. ರಾಜಕೀಯ ಅಪೇಕ್ಷೆ ಇಲ್ಲ. ನನ್ನ ಹತ್ಯೆಯಾದರೆ ಸಂಘ ಪರಿವಾರದ ಯಾವ ನಾಯಕರೂ ನನ್ನ ಅಂತಿಮ ದರ್ಶನಕ್ಕೆ ಬರಬಾರದು, ಶವ ಮೆರವಣಿಗೆ ಮಾಡಬಾರದು ಎಂದು ಹೇಳಿದರು.