ಶಿರ್ವ: ಸುನ್ನಿ ಜಾಮಿಯಾ ಮಸೀದಿ, ತೋಪನಂಗಡಿ ಮಸೀದಿ ಸಹಿತ ಇತರ ಮಸೀದಿಗಳಲ್ಲಿ ಶನಿವಾರ ಮುಸಲ್ಮಾನ ಬಾಂಧವರು ಈದುಲ್ ಫಿತ್ರ್ ನಮಾಜ್ ನೆರವೇರಿಸಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ರಮ್ಜಾನ್ ತಿಂಗಳಲ್ಲಿ 30 ದಿನಗಳ ಕಾಲ ಉಪವಾಸ ವೃತ ಆಚರಿಸಿದ ಬಳಿಕ ಚಂದ್ರ ದರ್ಶನದ ಆಧಾರದ ಮೇಲೆ ಮುಸ್ಲಿಮರು ಈದುಲ್ ಫಿತ್ರ್ ನ್ನು ಉಪವಾಸ ಕೊನೆಗೊಳಿಸುವ ಹಬ್ಬವಾಗಿ ಆಚರಿಸುತ್ತಿದ್ದು, ಶಿರ್ವ ಪರಿಸರದ ಮುಸ್ಲಿಮರು ಮಸೀದಿಗಳಲ್ಲಿ ನಮಾಜ್ ನೆರವೇರಿಸಿದರು.
ಮನುಕುಲಕ್ಕೆ ಏಕತೆ, ಸಮಾನತೆ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುವ ಸಾಮರಸ್ಯದ ಬೆಸುಗೆಯಾದ ರಂಜಾನ್ ಹಬ್ಬದ ಆಚರಣೆಯಿಂದ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು ಬದುಕನ್ನು ಮುನ್ನಡೆಸಲು ಸಾಧ್ಯವಾಗುತ್ತದೆ. ರಂಜಾನ್ ಹಬ್ಬದ ಪ್ರಾರ್ಥನೆಯೊಂದಿಗೆ ಪ್ರೀತಿ ವಿಶ್ವಾಸ, ಶಾಂತಿ ಸೌಹಾರ್ದತೆಯೊಂದಿಗೆ ಆತಂಕಗಳು ದೂರವಾಗಿ ನೆಮ್ಮದಿಯ ಜನಜೀವನ ನೆಲೆಗೊಳ್ಳಲಿ ಎಂದು ಶಿರ್ವ ಸುನ್ನಿ ಜಾಮಿಯಾ ಮಸೀದಿಯ ಖತೀಬರಾದ ಜನಾಬ್ ಸಿರಾಜುದ್ದೀನ್ ಝೈನಿ ಮತ್ತು ಶಿರ್ವ ಗ್ರಾ.ಪಂ. ಮಾಜಿ ಅಧ್ಯಕ್ಷ /ಹಾಲಿ ಸದಸ್ಯ ಹಸನಬ್ಬ ಶೇಕ್ ಆಶಯ ವ್ಯಕ್ತಪಡಿಸಿದ್ದಾರೆ.