ಹೆಬ್ರಿ ಎ.23: ನಾಡ್ಪಾಲು ಗ್ರಾಮದ ಸೋಮೇಶ್ವರ ಚೆಕ್ ಪೋಸ್ಟ್ ಬಳಿ ವಿಧಾನ ಸಭಾ ಚುನಾವಣೆಯ ನಿಮಿತ್ತ ವಿಶೇಷ ಕರ್ತವ್ಯದಲ್ಲಿ ಇದ್ದ ಪೊಲೀಸ್ ಅಧಿಕಾರಿಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಗಲಾಟೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಘಟನೆ ವರದಿಯಾಗಿದೆ.
ಹೆಬ್ರಿಯ ನಾಡ್ಪಾಲು ಗ್ರಾಮದ ಸೋಮೇಶ್ವರ ಚಕ್ ಪೋಸ್ಟ್ ನಲ್ಲಿ ಚುನಾವಣೆಯ ನಿಮಿತ್ತ ಹೆಬ್ರಿ ಠಾಣಾ ಪೊಲೀಸರು, ಅಬಕಾರಿ ಇಲಾಖೆಯ ಸಿಬ್ಬಂದಿ ಮತ್ತು ಅರೆ ಸೇನಾ ಪಡೆಯವರಿಗೆ ವಿಶೇಷ ಕರ್ತವ್ಯಕ್ಕೆ ನೆಮಿಸಲಾಗಿತ್ತು. ಈ ಪೈಕಿ ಚೆಕ್ ಪೋಸ್ಟ್‌ನಲ್ಲಿ ಕರ್ತವ್ಯದಲ್ಲಿ ಇದ್ದ ಹೆಬ್ರಿ ಠಾಣಾ ಪಿಸಿ ರಾಮತ್ ವುಲ್ಲ ಹಾಗೂ ಅಬಕಾರಿ ಇಲಾಖೆಯ ಕೃಷ್ಣ ಆಚಾರಿ ಅವರು ವಾಹನಗಳನ್ನು ತಪಾಸಣೆ ಮಾಡುತ್ತಿರುವಾಗ ರಾತ್ರಿ 11:30 ರ ಸುಮಾರಿಗೆ ಆಗುಂಬೆ ಕಡೆಯಿಂದ ಬಂದ ಆಶೋಕ್ ಲೈಲ್ಯಾಂಡ್ ಪಿಕಪ್ ವಾಹನವನ್ನು ಅದರ ಚಾಲಕ ರಾಜೇಂದ್ರನು ಅತೀವೇಗ ಹಾಗೂ ಅಜಾಗರುಕತೆಯಿಂದ ಚಲಾಯಿಸಿಕೊಂಡು ಬಂದು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಮತ್ ವುಲ್ಲಾ ಮತ್ತು ಕೃಷ್ಣ ಆಚಾರಿ ಇವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಅವರಿಗೆ ಗಾಯವಾಗಿರುತ್ತದೆ. ಕೂಡಲೇ ಇತರ ಅಧಿಕಾರಿಗಳು ಗಾಯಾಳುಗಳಿಗೆ ಆರೈಕೆ ಮಾಡಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ಸಲುವಾಗಿ ಆಗುಂಬೆ ಕಡೆಯಿಂದ ಬಂದ ಕಾರೊಂದನ್ನು ನಿಲ್ಲಿಸಿದಾಗ ಅದರ ಚಾಲಕನು ಸ್ವಲ್ಪ ಮುಂದೆ ಕೊಂಡು ಹೋಗಿ ನಿಲ್ಲಿಸಿದ್ದು. ಅದರಲ್ಲಿದ್ದ ಇಬ್ಬರು ವ್ಯಕ್ತಿಗಳಲ್ಲಿ ಗಾಯಾಳುವನ್ನು ಅಸ್ಪತ್ರೆಗೆ ಸಾಗಿಸಲು ನೆರವಾಗುವಂತೆ ವಿನಂತಿಸಿದಾಗ ಅವರು ಅಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ಬೈದು ಗಲಾಟೆ ಮಾಡಿ ಹಿಂದಕ್ಕೆ ದೂಡಿ ಅಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.