ಉಡುಪಿ: ಡಾ. ಜಿ ಶಂಕರ್ ಮನೆ ಸಂಸ್ಥೆ ಮೇಲೆ ಐಟಿ ದಾಳಿ – ಸರಕಾರ ಮೊಗವೀರ ಸಮುದಾಯಕ್ಕೆ ಮಾಡಿದ ಅವಮಾನ-ರಮೇಶ್ ಕಾಂಚನ್

ಉಡುಪಿ : ಮೊಗವೀರ ಸಮುದಾಯದ ಮುಖಂಡರಾದ ನಾಡೋಜ ಡಾ. ಜಿ ಶಂಕರ್ ಅವರ ಮನೆ ಹಾಗೂ ಸಂಸ್ಥೆಗಳ ಮೇಲೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿಯು ಮೊಗವೀರ ಸಮುದಾಯಕ್ಕೆ ಬಿಜೆಪಿ ನೇತೃತ್ವದ ಮೋದಿ ಸರಕಾರ ಮಾಡಿದ ಬಹುದೊಡ್ಡ ಅವಮಾನ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಮೊಗವೀರ ಸಮುದಾಯವನ್ನು ತಳಮಟ್ಟದಿಂದ ಮೇಲೆತ್ತುವುದರೊಂದಿಗೆ, ಸರ್ವರನ್ನು ಒಗ್ಗೂಡಿಸುವ ಮೂಲಕ ಸಮಾಜದಲ್ಲಿ ಸಂಘಟನೆಯನ್ನು ಬಲ ಪಡಿಸುವ ಬಹುದೊಡ್ಡ ಕೆಲಸವನ್ನು ಡಾ. ಜಿ ಶಂಕರ್ ಕಳೆದ ಹಲವಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಜಾತಿ, ಮತ, ಪಕ್ಷಬೇಧವನ್ನು ಲೆಕ್ಕಿಸದೆ ಕಷ್ಟದಲ್ಲಿರುವವರ ನೆರವಿಗೆ ಧಾವಿಸಿ ಬರುವ ಮಾನವೀಯ ಗುಣವನ್ನು ಹೊಂದಿರುವ ಜಿ ಶಂಕರ್ ಸಮುದಾಯದ ಹಾಗೂ ಇಡೀ ಸಮಾಜದ ಆಸ್ತಿಯಾಗಿದ್ದಾರೆ. ರಕ್ತದಾನ, ಆರೋಗ್ಯ ಚಿಕಿತ್ಸೆಗೆ ಸಹಾಯಧನ, ಉಚಿತ ಸಾಮೂಹಿಕ ವಿವಾಹ, ಗುರಿಕಾರರ ಸಮ್ಮಿಲನ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಧಾರ್ಮಿಕ ಕಾರ್ಯಕ್ರಮ, ದೇವಸ್ಥಾನದ ಜೀರ್ಣೋದ್ಧಾರ ಸೇರಿದಂತೆ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿರುವ ಶಂಕರ್ ವಿರುದ್ದ ಕೇಂದ್ರದ ಬಿಜೆಪಿ ಸರಕಾರ ಕೆಂಗಣ್ಣು ಬೀರಿರುವುದು ನಿಜಕ್ಕೂ ಖಂಡನೀಯ.

ಮೊಗವೀರ ಸಮುದಾಯ ಸಮಾಜದಲ್ಲಿ ತಲೆ ಎತ್ತಿ ನಿಂತರೆ ಬಿಜೆಪಿಗರಿಗೆ ಮುಂದೆ ಸಮಸ್ಯೆಯಾಗುತ್ತದೆ ಎಂಬ ಭ್ರಮೆಯಲ್ಲಿ ಡಾ. ಜಿ ಶಂಕರ್ ಅವರನ್ನು ಮಾನಸಿಕವಾಗಿ ಕುಗ್ಗಿಸಲು ಈ ದಾಳಿಯನ್ನು ನಡೆಸಿದ್ದು ಮೊಗವೀರ ಸಮುದಾಯ ಸೇರಿದಂತೆ ಎಲ್ಲರೂ ಕೂಡ ಬಿಜೆಪಿಯ ರಾಜಕೀಯ ಕುತಂತ್ರವನ್ನು ಅರ್ಥ ಮಾಡಿಕೊಂಡು ಚುನಾವಣೆಯಲ್ಲಿ ಸೂಕ್ತ ಉತ್ತರ ನೀಡಬೇಕು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

You cannot copy content from Baravanige News

Scroll to Top