‘ದಿ ಕೇರಳ ಸ್ಟೋರಿ’ ಸಿನಿಮಾದ ಟ್ರೇಲರ್ ಸದ್ಯ ಎಲ್ಲ ಕಡೆಗಳಲ್ಲಿ ಚರ್ಚೆ ಹುಟ್ಟುಹಾಕಿದೆ.
ಲವ್ ಜಿಹಾದ್ ವಿಚಾರವನ್ನು ಪ್ರಮುಖವಾಗಿಟ್ಟುಕೊಂಡು ಈ ಸಿನಿಮಾ ಸಿದ್ಧಗೊಂಡಿದೆ. ಐಸಿಸ್ ವಿಚಾರವನ್ನೂ ಹೇಳಲಾಗಿದೆ. ಇತ್ತೀಚೆಗೆ ಟ್ರೇಲರ್ ರಿಲೀಸ್ ಆಗಿತ್ತು. ಈಗ ಟ್ರೇಲರ್ಗೆ ಒಂದು ವರ್ಗದವರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಿನಿಮಾ ರಿಲೀಸ್ ಆಗಬಾರದು ಎಂದು ಒಂದು ವರ್ಗದವರು ಹೇಳುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆ ಜೋರಾಗಿದೆ. ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಚಿತ್ರದ ಟ್ರೇಲರ್ ಬಗ್ಗೆ ಅಸಮಾಧಾನಗೊಂಡಿದ್ದಾರೆ.
ಕೇರಳದಲ್ಲಿ ಸಿನಿಮಾ ರಿಲೀಸ್ಗೆ ತಡೆ ಬಿದ್ದರೂ ಅಚ್ಚರಿ ಇಲ್ಲ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ‘ದಿ ಕೇರಳ ಸ್ಟೋರಿ’ ಟ್ರೇಲರ್ ನೋಡಿದ್ದು, ಅಸಮಧಾನಗೊಂಡಿದ್ದಾರೆ. ಈ ಚಿತ್ರದಿಂದ ಕೇರಳಕ್ಕೆ ಕಳಂಕ ಬರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಕೇರಳದ ಕಥೆ ಇದೆ. ಕೇರಳದ ಯುವತಿ ಒಬ್ಬಳು ಹಿಂದೂ ಧರ್ಮದಿಂದ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ. ಬಳಿಕ ಅವಳು ಐಸಿಸ್ ಸೇರುತ್ತಾಳೆ. ಅಲ್ಲಿ ನರಕ ಅನುಭವಿಸುತ್ತಾಳೆ. ಆ ಬಳಿಕ ಆಕೆ ತನ್ನ ಕಥೆ ಹೇಳಿಕೊಳ್ಳುತ್ತಾಳೆ. ಇದಿಷ್ಟು ವಿಚಾರ ‘ದಿ ಕೇರಳ ಸ್ಟೋರಿ’ ಸಿನಿಮಾ ಟ್ರೇಲರ್ನಲ್ಲಿದೆ.
‘ಈ ಸಿನಿಮಾ ರಾಜ್ಯದ ವಿರುದ್ಧ ದ್ವೇಷವನ್ನು ಹರಡುವಂತೆ ಮಾಡುತ್ತಿದೆ. ಲವ್ ಜಿಹಾದ್ ಅನ್ನೋದು ಸುಳ್ಳು. ತನಿಖಾ ಸಂಸ್ಥೆ, ನ್ಯಾಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯದಿಂದ ಲವ್ ಜಿಹಾದ್ ಎಂಬ ವಿಚಾರ ತಿರಸ್ಕರಿಸಲ್ಪಟ್ಟಿದೆ. ಈಗ ಲವ್ ಜಿಹಾದ್ ವಿಚಾರನ್ನೇ ಚಿತ್ರದ ಥೀಮ್ ಮಾಡಿಕೊಂಡಿದ್ದಾರೆ. ರಾಜ್ಯದ ಬಗ್ಗೆ ಅಪಪ್ರಚಾರ ಮಾಡಲು ಸಂಘಪರಿವಾರ ಪ್ರಯತ್ನಿಸುತ್ತಿದೆ’ ಎಂದಿದ್ದಾರೆ ಪಿಣರಾಯಿ ವಿಜಯನ್.
ಇದು ನೈಜ ಘಟನೆ ಆಧಾರಿತ ಸಿನಿಮಾ ಎಂದು ನಿರ್ದೇಶಕ ಸುದಿಪ್ತೋ ಸೇನ್ ಹೇಳಿದ್ದಾರೆ. ಇರಾಕ್ ಮತ್ತು ಸಿರಿಯಾದಲ್ಲಿ ಉಗ್ರಗಾಮಿ ಸಂಘಟನೆಗಳಿಗೆ ಸೇರಿಕೊಂಡ ಕೇರಳದ 32,000 ಮಹಿಳೆಯರು ಕಣ್ಮರೆಯಾಗುವುದರ ಸುತ್ತ ಚಿತ್ರದ ಕಥೆ ಸಾಗುತ್ತದೆ. ಅದಾ ಶರ್ಮಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5ರಂದು ರಿಲೀಸ್ ಆಗಲಿದೆ. ಸದ್ಯ ಸಿನಿಮಾ ರಿಲೀಸ್ಗೆ ಕೇರಳ ಸರ್ಕಾರ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ, ಸಿನಿಮಾ ಮೇ5ಕ್ಕೆ ರಿಲೀಸ್ ಆಗಲಿದೆಯೇ ಅಥವಾ ಇಲ್ಲವೇ ಎಂಬುದನ್ನು ಕಾದು ನೋಡಬೇಕಿದೆ.