ಬೆಂಗಳೂರು : ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮತದಾನಕ್ಕೆ 8 ದಿನ ಮಾತ್ರ ಬಾಕಿಯಿದೆ. ಇದರ ನಡುವೆಯೇ ನಿನ್ನೆ ಅಷ್ಟೇ ಬಿಜೆಪಿ ತನ್ನ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇಂದು (ಮೇ 02) ಕಾಂಗ್ರೆಸ್ ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಎಸ್‍ಸಿ ಸಮುದಾಯಕ್ಕೆ ಶೇ. 15 ರಿಂದ 17ಕ್ಕೆ, ಎಸ್‍ಟಿ ಸಮುದಾಯಕ್ಕೆ ಶೇ. 3 ರಿಂದ 7ಕ್ಕೆ, ಅಲ್ಪಸಂಖ್ಯಾತರಿಗೆ ಶೇ. 4ರ ಮರುಸ್ಥಾಪನೆ, ಲಿಂಗಾಯತ,ಒಕ್ಕಲಿಗ ಮತ್ತಿತರ ಸಮುದಾಯಗಳ ಆಶೋತ್ತರಗಳನ್ನು ಈಡೇರಿಸಲು ಮೀಸಲಾತಿಯನ್ನು ಶೇ. 50ರಿಂದ 75ರವರೆಗೆ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಇದರ ಜೊತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದರ ಜೊತೆಗೆ NEP ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ ಮಾಡುವುದಾಗಿ ಹೇಳಿದೆ.
ಕಾಂಗ್ರೆಸ್ ಬರಲಿದೆ, ಪ್ರಗತಿ ತರಲಿದೆ ಎನ್ನುವ ಘೋಷ ವಾಕ್ಯದೊಂದಿಗೆ ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್ ಬದ್ಧತೆ’ ಎನ್ನುವ ಹೆಸರಿನಲ್ಲಿ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆಗೊಳಿಸಿದರು.
ಪ್ರಣಾಳಿಕೆಯಲ್ಲಿ ಏನಿದೆ..!??
ಬಿಜೆಪಿ ಜಾರಿಗೆ ತಂದ ಎಲ್ಲಾ ಜನ ವಿರೋಧಿ ಕಾನೂನುಗಳು ಒಂದು ವರ್ಷದಲ್ಲಿ ರದ್ದುಗೊಳಿಸುವುದರ ಜೊತೆಗೆ ಧರ್ಮ ಮತ್ತು ಜಾತಿಯ ಹೆಸರಿನಲ್ಲಿ ಸಮಾಜದಲ್ಲಿ ದ್ವೇಷವನ್ನು ಬಿತ್ತಿ ವಿಭಜನೆಗೆ ಕಾರಣವಾಗುವ, ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ಕಠಿಣ ಮತ್ತು ನಿರ್ಣಾಯಕ ಕಾನೂನು ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷ ಬದ್ಧವಾಗಿದೆ.
ಸಂವಿಧಾನವೇ ಪವಿತ್ರ ಎಂದು ನಂಬಿರುವ ನಾವು ಯಾವುದೇ ವ್ಯಕ್ತಿಗಳಾಗಲಿ ಭಜರಂಗದಳ ಮತ್ತು ಪಿಎಫ್‍ಐಗಳು ಸೇರಿದಂತೆ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಇತರರಾಗಲಿ, ಸಂವಿಧಾನದ ವಿಧಿಗಳನ್ನು ಉಲ್ಲಂಘಿಸುವುದನ್ನು ಸಹಿಸುವುದಿಲ್ಲ. ಆದ ಕಾರಣ ಇಂತಹ ವ್ಯಕ್ತಿಗಳು ಮತ್ತು ಸಂಘಟನೆಗಳ ನಿಷೇಧವೂ ಸೇರಿದಂತೆ ಬಲವಾದ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು.
ಈಗಾಗಲೇ ಘೋಷಿಸಿರುವ ಗೃಹಶಕ್ತಿ ಯೋಜನೆಯಡಿ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಜೊತೆಗೆ ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ 3000ರೂ. ಪದವೀಧರರಿಗೆ, 1500 ರೂ, ಡಿಪ್ಲೊಮಾ ಪದವೀಧರರಿಗೆ ನೀಡುತ್ತೇವೆ. ಅನ್ನಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ ಉಚಿತ 10 ಕೆಜಿ ಅಕ್ಕಿ ಹಾಗೂ ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಪ್ರತಿ ಮನೆಯ ಯಜಮಾನಿಗೆ ನೀಡಲಾಗುವುದು. ಜೊತೆಗೆ ಎಲ್ಲಾ ಮಹಿಳೆಯರಿಗೆ ಸರ್ಕಾರಿ ಬಸ್‍ನಲ್ಲಿ ಉಚಿತ ಪ್ರಯಾಣ ಮಾಡಲಾಗುವುದು.
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ರದ್ದುಗೊಳಿಸುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಜೊತೆಗೆ ಪಠ್ಯಪುಸ್ತಕ ಮರಳಿ ಪರಿಷ್ಕರಣೆಗೊಳಿಸಲಾಗುವುದು. ಪಿಯುಸಿಯಿಂದ ಪಿಜಿವರೆಗೂ ವಿದ್ಯಾರ್ಥಿನಿಯರಿಗೆ ಉಚಿತ ಲ್ಯಾಪ್ ಟಾಪ್, ಡಿಜಿಟಲ್ ನೋಟ್ ಪ್ಯಾಡ್ ಉಚಿತವಾಗಿ ನೀಡಲಾಗುವುದು. ಎರಡು ವರ್ಷಗಳಿಗೊಮ್ಮೆ ಹಿರಿಯ ನಾಗರಿಕರಿಗೆ ರಾಜ್ಯದ 15, ದೇಶದ 10 ಪ್ರವಾಸಿ ತಾಣಗಳಿಗೆ ಉಚಿತ ಯಾತ್ರಾ ಪ್ರವಾಸ ಮಾಡಲಾಗುವುದು.
ಬಿಜೆಪಿ ಒಳ ಮೀಸಲಾತಿ ರದ್ದುಗೊಳಿಸಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ ಮಾಡಲಾಗುತ್ತದೆ. ಎಸ್‍ಸಿ-ಎಸ್‍ಟಿ ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ಧವಾಗಿದೆ.
ಸರ್ಕಾರಿ, ಅನುದಾನಿತ ಶಾಲೆಯಲ್ಲಿ ಓದಿ ಪಿಯುಸಿಯಲ್ಲಿ ಉನ್ನತ ಶ್ರೇಣಿಯಲ್ಲಿ ಪಾಸ್ ಆದ ಬಾಲಕಿಯರಿಗೆ ಉಚಿತ ಎಲೆಕ್ಟ್ರಿಕ್ ವಾಹನ ಹಾಗೂ ಬುಡಕಟ್ಟು ಸಮುದಾಯದ 100 ಸಾಧಕರಿಗೆ ತಲಾ ಒಂದು ಲಕ್ಷ ಮೊತ್ತದ ಆದಿವಾಸಿ ಸಿರಿ ಗೌರವ ನೀಡಲಾಗುವುದು.
ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವರ್ಷಕ್ಕೆ 500 ಕೋಟಿ ಅನುದಾನ ನೀಡುತ್ತೇವೆ. ನೇಕಾರರಿಗೆ 10 ಗಂಟೆ ತಡೆ ರಹಿತ ಉಚಿತ ವಿದ್ಯುತ್ ಹಾಗೂ ವಿಧವೆ ಪಿಂಚಣಿ 2500 ಹೆಚ್ಚಳ ಮಾಡಲಾಗುವುದು. ದುಡಿಯುವ ಮಹಿಳೆಯರಿಗಾಗಿ 100 ಹಾಸ್ಟಲ್ ನಿರ್ಮಾಣ ಮಾಡಲಾಗುವುದು. ನಿರ್ಭಯ ವಾಹಿನಿ ಯೋಜನೆ ಮೂಲಕ ಹೈಸ್ಕೂಲ್, ಪಿಯುಸಿ ಬಿಟ್ಟವರಿಗೆ ಉಚಿತ ವಾಹನ ತರಬೇತಿ ಹಾಗೂ ಸಬ್ಸಿಡಿಯಲ್ಲಿ ಆಟೋ, ಮತ್ತು ಕಾರ್ ನೀಡಲಾಗುತ್ತದೆ.
ಒಂದು ಬಾರಿಯ ನೆರವಿನ ರೂಪದಲ್ಲಿ ಬೀದಿ ವ್ಯಾಪಾರಿಗಳಿಗೆ 20 ಸಾವಿರ ಅನುದಾನ ಮಾಡಲಾಗುವುದು, ಹಿರಿಯ ನಾಗರಿಕರಿಗೆ ಎರಡು ವರ್ಷಕ್ಕೊಮ್ಮೆ ರಾಜ್ಯದ 15 ದೇಶದ 10 ಪವಿತ್ರ ಸ್ಥಳಗಳಿಗೆ ಉಚಿತ ಪ್ರವಾಸ ನೀಡುತ್ತೇವೆ. ಕಾಶಿ, ಮಥುರ, ಕೈಲಾಸ, ಮಾನಸ ಸರೋವರ ಯಾತ್ರೆಯ ಸಬ್ಸಿಡಿ ಹೆಚ್ಚಳಗೊಳಿಸುತ್ತೇವೆ.
ವಿಶೇಷ ಚೇತನರಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಾಲೆ ಸ್ಥಾಪನೆ ಹಾಗೂ ಅಂಗವಿಕಲ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ ನೀಡಲಾಗುವುದು.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ನಿವೃತ್ತಿ ಸೈನಿಕ ಅಭಿವೃದ್ಧಿ ನಿಗಮ ಸ್ಥಾಪನೆ ಹಾಗೂ ವಾರ್ಷಿಕ 250 ಕೋಟಿ ಅನುದಾನ ನೀಡಲಾಗುವುದು. ಸ್ವ ಉದ್ಯೋಗಕ್ಕಾಗಿ ಶೇ 5% ಬಡ್ಡಿಯಲ್ಲಿ 10 ಲಕ್ಷದವರೆಗೆ ಸಾಲ ಹಗೂ ಪತ್ರಕರ್ತರ ಕಲ್ಯಾಣ ನಿಧಿ ಸ್ಥಾಪನೆ 500 ಕೋಟಿ ಅನುದಾನ ನೀಡುತ್ತೇವೆ.
ವಕೀಲರ ಸಂರಕ್ಷಣಾ ಕಾಯ್ದೆ ಅಕ್ಷರಶಃ ಜಾರಿ ಹಾಗೂ ಅನಿವಾಸಿ ಕನ್ನಡಿಗರ ವ್ಯವಹಾರಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗುವುದು. ಅನಿವಾಸಿ ಕನ್ನಡಗರು ರಾಜ್ಯದಲ್ಲಿ ಉದ್ಯಮ ನಡೆಸಲು 1 ಸಾವಿರ ಕೋಟಿ ಅವರ್ತನ ನಿಧಿ ನೀಡಲಾಗುತ್ತದೆ ಎಂದು ತಿಳಿಸಿದೆ