ಕಾಪುವಿನ ಸುಂದರ ಭವಿಷ್ಯಕ್ಕಾಗಿ ದೂರದರ್ಶಿತ್ವದ ಯೋಜನೆಯುಳ್ಳ ನೀಲ ನಕ್ಷೆ ಸಿದ್ಧ: ಗುರ್ಮೆ

ಕಾಪು: ಕಾಪುವಿನ ಸುಂದರ ಭವಿಷ್ಯಕ್ಕಾಗಿ ದೂರದರ್ಶಿತ್ವದ ಯೋಜನೆಗಳುಳ್ಳ ನೀಲ ನಕ್ಷೆಯನ್ನು ಈಗಾಗಲೇ ಸಿದ್ಧಪಡಿಸಿದ್ದೇವೆ. ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಕಲ್ಪನೆಯ ಸಾಕಾರಕ್ಕಾಗಿ ಮತ್ತು ಸರ್ವ ವ್ಯಾಪಿ, ಸರ್ವ ಸ್ಪರ್ಷಿ ಚಿಂತನೆಯೊಂದಿಗೆ ಎಲ್ಲಾ ಜಾತಿ, ಧರ್ಮ, ಮತ, ಸಮುದಾಯದ ಜನರ ಸೇವೆಗಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಕಾಪು ವಿಧಾನಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿ ವಿನಂತಿಸಿದ್ದಾರೆ.

ಕಾಪು ಪುರಸಭಾ ವ್ಯಾಪ್ತಿಯ ಕರಾವಳಿ ವಾರ್ಡ್, ಪೊಲಿಪುಗುಡ್ಡೆ, ಭಾರತ್‌ನಗರ, ಕಲ್ಯ, ದಂಡತೀರ್ಥ, ಕೋತಲಕಟ್ಟೆ, ಕೈಪುಂಜಾಲು, ಕಾಪು ಪರಿಸರದಲ್ಲಿ ಮತಯಾಚನೆ ನಡೆಸಿ, ಜೇಸಿ ಭವನದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ಪ್ರಧಾನ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಹಾಗೂ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕಾರದ ಅಭಿವೃದ್ಧಿ ಯೋಜನೆಗಳು ಮತ್ತು ಮಹತ್ವಾಕಾಂಕ್ಷಿಯ ಜನೋಪಯೋಗಿ ಜನ ಸೇವಾ ಕಾರ್ಯಕ್ರಮಗಳು ಬಿಜೆಪಿಯ ಗೆಲುವಿಗೆ ಪೂರಕವಾಗಲಿವೆ. ಅದರ ಜತೆಗೆ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್ ಅವರು ಕಳೆದ ಐದು ವರ್ಷಗಳಲ್ಲಿ ನಡೆಸಿರುವ ಮೂರು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾರ್ಯಕ್ರಮಗಳು ಪಕ್ಷದ ಗೆಲುವಿನ ಅಂತರವನ್ನು ಹೆಚ್ಚಿಸುವ ವಿಶ್ವಾಸವಿದೆ ಎಂದರು.

ಸರ್ವ ವ್ಯಾಪಿ, ಸರ್ವ ಸ್ಪರ್ಷಿ ಚಿಂತನೆಯೊಂದಿಗೆ ಎಲ್ಲಾ ಜಾತಿ, ಧರ್ಮ, ಮತ, ಸಮುದಾಯದ ಜನರ ಸೇವೆಗಾಗಿ ನನ್ನ ಜೀವನದ ಪ್ರತೀಯೊಂದು ಕ್ಷಣಗಳನ್ನೂ ಮುಡಿಪಾಗಿಟ್ಟುಕೊಂಡು ಬಂದಿದ್ದೇನೆ. ಈವರೆಗೂ ನಾನು ಯಾವುದೇ ಒಂದು ವರ್ಗಕ್ಕೆ ಸೀಮಿತವಾಗಿರದೇ, ಜಾತಿಯ ಪರಿಮಿತಿಯಲ್ಲದೇ ಎಲ್ಲಾ ವರ್ಗಗಳ ಜನರ ಭಾವನೆಗಳಿಗೂ ಸ್ಪಂಧಿಸಿಕೊಂಡು ಬಂದಿದ್ದೇನೆ. ಕ್ಷೇತ್ರದ ಪ್ರತೀಯೊಬ್ಬ ಮತದಾರರ ಆಶೋತ್ತರಗಳಿಗೆ ಸ್ಪಂಧಿಸುವ ಗುರಿಯೊಂದಿಗೆ ಚುನಾವಣಾ ಕಣದಲ್ಲಿದ್ದೇನೆ. ತಾವೆಲ್ಲರೂ ಬೆಂಬಲಿಸಿ, ಗೆಲ್ಲಿಸುವಿರೆಂಬ ವಿಶ್ವಾಸವಿದೆ ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿಕಟ ಪೂರ್ವ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಸಮಾಜ ಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟುಕೊಂಡಿರುವ ಸುರೇಶ್ ಶೆಟ್ಟಿ ಅವರನ್ನು ಪಕ್ಷ ಅಭ್ಯರ್ಥಿಯನ್ನಾಗಿ ಘೋಷಿಸುವ ಮೂಲಕ ಕಾರ್ಯಕರ್ತರ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ಅವರನ್ನು ಬಹುಮತದಿಂದ ಆರಿಸಿ, ವಿಧಾನಸಭೆಗೆ ಕಳುಹಿಸುವ ಮೂಲಕ ಕಾಪು ಕ್ಷೇತ್ರದ ಗೌರವವನ್ನು ಎತ್ತಿಹಿಡಿಯೋಣ. ಅದಕ್ಕಾಗಿ ನಾವು ನಿರಂತರವಾಗಿ ಶ್ರಮಿಸೋಣ ಎಂದರು.

ಬಿಜೆಪಿ ಅಭ್ಯರ್ಥಿ ಪ್ರಮುಖ್ ಗಂಗಾಧರ ಸುವರ್ಣ, ಕಾಪು ಪುರಸಭಾ ವ್ಯಾಪ್ತಿ ಮಹಾಶಕ್ತಿ ಕೆಂದ್ರದ ಅಧ್ಯಕ್ಷ ಸಂದೀಪ್ ಶೆಟ್ಟಿ ಕನ್ಯಾನಗುತ್ತು, ಪುರಸಭೆ ಮಾಜಿ ಅಧ್ಯಕ್ಷ ಅನಿಲ್ ಕುಮಾರ್, ಸದಸ್ಯರಾದ ಅರುಣ್ ಶೆಟ್ಟಿ ಪಾದೂರು, ಕಿರಣ್ ಆಳ್ವ, ರತ್ನಾಕರ ಶೆಟ್ಟಿ, ಸುರೇಶ್ ದೇವಾಡಿಗ, ಲತಾ ದೇವಾಡಿಗ, ಮಾಜಿ ಸದಸ್ಯರಾದ ರಮೇಶ್ ಹೆಗ್ಡೆ, ಗುಲಾಬಿ ಪಾಲನ್, ಪ್ರದೀಪ್ ಯು., ಪಕ್ಷದ ಮುಖಂಡರಾದ ರಮಾ ವೈ. ಶೆಟ್ಟಿ, ಮೋಹನ್ ಕಲ್ಯ, ನರೇಶ್ ಕೈಪುಂಜಾಲು, ರಮೇಶ್ ಪೂಜಾರಿ, ಚಂದ್ರಹಾಸ ಶೆಟ್ಟಿ, ರಂಜಿತ್ ದೇವಾಡಿಗ, ಸುನಿಲ್ ಮಡಿವಾಳ, ಅಶೋಕ್ ಶೆಟ್ಟಿ, ಪೂರ್ಣಿಮಾ ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು.

You cannot copy content from Baravanige News

Scroll to Top