ಮೈಸೂರು: ನಗರದ ಕೆ. ಸುಬ್ರಹ್ಮಣ್ಯ ರೈ ಎಂಬುವವರ ಮನೆಯ ಮೇಲೆ ಆದಾಯ ತೆರಿಗೆ (IT) ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 1 ಕೋಟಿ ರೂ. ನಗದು ವಶ ಪಡೆಸಿಕೊಂಡಿದ್ದಾರೆ.
ಸುಬ್ರಹ್ಮಣ್ಯ ರೈ ಅವರು ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಕುಮಾರ್ ರೈ ಸೋದರರಾಗಿದ್ದಾರೆ. ಮೈಸೂರಿನ ಸುಬ್ರಹ್ಮಣ್ಯ ರೈ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಸುಬ್ರಹ್ಮಣ್ಯ ರೈ ಅವರ ಮನೆಯ ಅಂಗಳದ ಮರದಲ್ಲಿ ಮಾವಿನ ಹಣ್ಣಿನ ಬಾಕ್ಸ್‌ನಲ್ಲಿ ಬಚ್ಚಿಡಲಾಗಿದ್ದ 1 ಕೋಟಿ ರೂ. ನಗದನ್ನು ವಶಕ್ಕೆ ಪಡೆದರು.
ನಗರದ ಸಿಹಿ ತಿಂಡಿ ಮಾರಾಟ ಮಳಿಗೆಯಲ್ಲಿ ಐಟಿ ರೇಡ್ ಮಾಡಿದ್ದಾರೆ. ಬಾಂಬೆ ಟಿಫಾನಿಸ್ ಸಿಹಿ ತಿಂಡಿ ಅಂಗಡಿ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಮೈಸೂರಿನ ಡಿ. ದೇವರಾಜ ಅರಸು ರಸ್ತೆಯ ಬಾಂಬೆ ಟಿಫಾನಿಸ್ ಅನಿಲ್ ಎಂಬುವರ ಮಾಲೀಕತ್ವದಲ್ಲಿರುವ ಸಂಸ್ಥೆ, ಯಾದವಗಿರಿಯಲ್ಲಿರುವ ನಿವಾಸ ಹಾಗೂ ಆರ್.ಟಿ.ಓ. ಕಚೇರಿ ಬಳಿ ಇರುವ ನಿವಾಸಗಳ ಮೇಲೂ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿರುವ 20ಕ್ಕೂ ಹೆಚ್ಚು ಅಧಿಕಾರಿಗಳ ತಂಡ ದಾಳಿ ನಡೆಸಿದ್ದಾರೆ. ದೇವರಾಜ ಅರಸು ರಸ್ತೆ, ಸಿದ್ದಾರ್ಥ ನಗರ ಜೆಪಿ ನಗರದಲ್ಲಿರುವ ಶಾಖೆಗಳು ಹಾಗೂ ತಯಾರಿಕಾ ಘಟಕದಲ್ಲೂ ಪರಿಶೀಲನೆ ನಡೆಸಿದ್ದಾರೆ.
ಚುನಾವಣಾ ಹೊಸ್ತಿಲಲ್ಲಿ ಬೆಂಗಳೂರು ಸೇರಿದಂತೆ 5 ಪ್ರಮುಖ ನಗರದಲ್ಲಿ ಬೃಹತ್ ಐಟಿ ದಾಳಿ ನಡೆದಿದೆ. 5 ಬ್ಯುಸಿನೆಸ್‍ಮೆನ್‍ಗಳ ಮನೆಯ ಮೇಲೆ ಐಟಿ ದಾಳಿ ನಡೆಸಿದ್ದಾರೆ. ಮೈಸೂರು, ಮಂಗಳೂರು, ಬೆಂಗಳೂರು, ಮಂಡ್ಯ, ಹುಬ್ಬಳ್ಳಿಯಲ್ಲಿ ದಾಳಿ ನಡೆಸಿ, ದಾಖಲಾತಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ.
ಪುತ್ತೂರು ಕೈ ಅಭ್ಯರ್ಥಿಯ ಸಹೋದರ ಮನೆ ಮೇಲೆ ಐಟಿ ರೈಡ್: ಗಿಡದಲ್ಲಿ ಕಂತೆ ಕಂತೆ ನೋಟು 1 ಕೋಟಿ ಜಪ್ತಿ
