ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರದಲ್ಲಿ ತೊಡಗಿವೆ. ಅಲ್ಲದೇ ಮತದಾರರನ್ನು ಸೆಳೆಯಲು ತಮ್ಮ ಪಕ್ಷದ ಪ್ರಣಾಳಿಕೆಗಳಲ್ಲಿ ವಿವಿಧ ಭರವಸೆಗಳನ್ನು ನೀಡಿವೆ. ಬೆಳಗಾವಿ ಜಿಲ್ಲೆಯ ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯ ಪ್ರಣಾಳಿಕೆಯಲ್ಲಿನ ಒಂದು ಭರವಸೆ ಎಲ್ಲರ ಹುಬ್ಬೇರಿಸಿ ನೋಡುವಂತೆ ಮಾಡಿದೆ.
ಬೆಳಗಾವಿ ಜಿಲ್ಲೆ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ವಧು-ವರರ ಮದುವೆ ಭಾಗ್ಯವನ್ನು ಘೋಷಣೆ ಮಾಡಿದ್ದಾರೆ. ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ ಈ ಪ್ರಣಾಳಿಕೆ ಸಾಕಷ್ಟು ಸದ್ದು ಮಾಡುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನೊಂದು ಅಚ್ಚರಿ ಹಾಗೂ ವಿಶೇಷ ಏನಂದರೆ ಗುರುಪುತ್ರ ಕುಳ್ಳೂರ ಹಾಗೂ ಪುಂಡಲೀಕ ಕುಳ್ಳೂರ ಇಬ್ಬರೂ ಸಹೋದರರು. ಆದ್ರೆ, ಗುರುಪುತ್ರ ಕೆಂಪಣ್ಣ ಕುಳ್ಳೂರ ಅರಭಾವಿ ವಿಧಾನಸಭೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದದ್ದರೆ, ಪುಂಡಲೀಕ ಕುಳ್ಳೂರ ಗೋಕಾಕ್ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದಾರೆ. ಇದೀಗ ಇವರಿಬ್ಬರ ಪ್ರಣಾಳಿಕೆಯ ಸಾರ್ವಜನಿಕರ ಹುಬ್ಬೇರಿಸಿದೆ. ಅಲ್ಲದೇ ಟ್ರೋಲ್ ಪೇಜ್ಗಳು ಸಹ ಇದನ್ನು ಇಟ್ಟುಕೊಂಡು ನಾನಾ ರೀತಿಯಲ್ಲಿ ಟ್ರೋಲ್ ಮಾಡುತ್ತಿದ್ದಾರೆ.