ಹೊನ್ನಾವರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ಗೆ ಹದ್ದು ಡಿಕ್ಕಿ ಹೊಡೆದು ಆತಂಕ ಸೃಷ್ಟಿಯಾಗಿದ್ದ ಘಟನೆ ಮೊನ್ನೆಯಷ್ಟೇ ನಡೆದಿತ್ತು. ಈ ದುರ್ಘಟನೆ ಮಾಸುವ ಮುನ್ನವೇ ಕೆಪಿಸಿಸಿ ಅಧ್ಯಕ್ಷರಿಗೆ ಇವತ್ತೂ ಒಂದು ಶಾಕ್ ಉಂಟಾಗಿದೆ.
ಚುನಾವಣಾ ಪ್ರಚಾರ ಹಿನ್ನೆಲೆಯಲ್ಲಿ ಶಿವಕುಮಾರ್ ಇವತ್ತು ಹೊನ್ನಾವರಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನಿಂದ ಹೊನ್ನಾವರ ಕಡೆಗೆ ಶಿವಕುಮಾರ್ ಆಗಮಿಸುತ್ತಿದ್ದರು. ಇಲ್ಲಿನ ರಾಮತೀರ್ಥ ಬಳಿಯಿರುವ ಹೆಲಿಪ್ಯಾಡ್ಗೆ ಬರುತ್ತಿದ್ದಂತೆಯೇ ಅನಾಹುತದ ಆತಂಕ ಎದುರಾಗಿತ್ತು.
ಹೆಲಿಕಾಪ್ಟರ್ ಇನ್ನೇನು ಲ್ಯಾಂಡ್ ಆಗಬೇಕು ಅನ್ನುವಷ್ಟರಲ್ಲಿ, ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿದೆ. ಡಿಕೆಎಸ್ ಅವರಿದ್ದ ಹೆಲಿಕಾಪ್ಟರ್ಗೆ ಸಿಗ್ನಲ್ ಕೊಡುವ ಉದ್ದೇಶದಿಂದ ಸ್ಮೂಕ್ ಕ್ಯಾಂಡಲ್ನಿಂದ ಹೆಲಿಪ್ಯಾಡ್ ಬಳಿ ಹೊಗೆ ಹಾಕಲಾಗಿತ್ತು.
ಆದರೆ ಈ ವೇಳೆ ಹೆಲಿಪ್ಯಾಡ್ ಬಳಿಯಿದ್ದ ಹುಲ್ಲಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ.
ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಕೊನೆಗೆ ಹೆಲಿಕಾಪ್ಟರ್ ಅನ್ನು ಪೈಲೆಟ್ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಅಲ್ಲಿಂದ ಶಿವಕುಮಾರ್ ನೇರವಾಗಿ ಸೆಂಟ್ ಥಾಮಸ್ ಸಭಾಂಗಣದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಹೋಗಿ ಕಾಂಗ್ರೆಸ್ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಾರೆ.