ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ: ‘ಪಿಎಫ್‌ಐ ಮಾಸ್ಟರ್ ಟ್ರೈನರ್’ ತುಫೈಲ್ ವಿರುದ್ಧ ಚಾರ್ಜ್‌ಶೀಟ್..!!

ದಕ್ಷಿಣ ಕನ್ನಡ: ಬಿಜೆಪಿ ಯುವ ಮೋರ್ಚಾ ಸದಸ್ಯ ಪ್ರವೀಣ್ ನೆಟ್ಟಾರು ಅವರ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಎನ್‌ಐಎ ಮಂಗಳವಾರ ಇನ್ನಿಬ್ಬರು ಆರೋಪಿ ಪಿಎಫ್‌ಐ ಕಾರ್ಯಕರ್ತರ ವಿರುದ್ಧ ಪೂರಕ ಚಾರ್ಜ್‌ಶೀಟ್ ಸಲ್ಲಿಸಿದೆ.

ಚಾರ್ಜ್‌ಶೀಟ್‌ನಲ್ಲಿ ಹೆಸರಿಸಲಾದ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ತುಫೈಲ್ ಎಂ ಹೆಚ್ ಎಂದು ಗುರುತಿಸಲಾಗಿದ್ದು, ಆತ ತಲೆಮರೆಸಿಕೊಂಡಿದ್ದ, ಎನ್‌ಐಎ ತಂಡವು ಬೆಂಗಳೂರಿನಲ್ಲಿ ಪತ್ತೆಹಚ್ಚಿ ಬಂಧಿಸಿದೆ.

ಕೊಡಗು ಜಿಲ್ಲೆಯ ನಿವಾಸಿಯಾದ ತುಫೈಲ್ ಎಂ.ಹೆಚ್. ಕೊಡಗು ಜಿಲ್ಲೆಯ ಪಿಎಫ್‌ಐ ‘ಸೇವಾ ತಂಡ’ಗಳ ಉಸ್ತುವಾರಿ ಮತ್ತು ನಿಷೇಧಿತರಿಗೆ ಶಸ್ತ್ರಾಸ್ತ್ರ ತರಬೇತಿ ಸೇರಿದಂತೆ ಸುಧಾರಿತ ತರಬೇತಿಯನ್ನು ನಿಯಮಿತವಾಗಿ ನೀಡುವ ‘ಪಿಎಫ್‌ಐ ಮಾಸ್ಟರ್ ಟ್ರೈನರ್’ ಎಂದು ಎನ್‌ಐಎ ತನಿಖೆಯಿಂದ ತಿಳಿದುಬಂದಿದೆ.

ಎನ್‌ಐಎ ತನಿಖೆಯ ಪ್ರಕಾರ ತುಫೈಲ್ ಕೊಡಗು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮತ್ತು ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ಪ್ರವೀಣ್ ನೆಟ್ಟಾರು ಹತ್ಯೆಯಲ್ಲಿ ಭಾಗಿಯಾದ ಎಂಬ ಮೂವರು ದುಷ್ಕರ್ಮಿಗಳಿಗೆ ಆಶ್ರಯ ನೀಡಿದ್ದರು ಎಂದು ತಿಳಿದು ಬಂದಿದೆ.

ತುಫೈಲ್ ಮತ್ತು ಮಹಮ್ಮದ್ ಜಬೀರ್ ವಿರುದ್ಧ ಐಪಿಸಿ ಮತ್ತು ಯುಎ (ಪಿ) ಆಕ್ಟ್, 1967 ರ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಇದರೊಂದಿಗೆ ಪ್ರಕರಣದಲ್ಲಿ ಒಟ್ಟು 21 ಆರೋಪಿಗಳನ್ನು ಚಾರ್ಜ್‌ಶೀಟ್ ಮಾಡಲಾಗಿದೆ.

ಜುಲೈ 26, 2022 ರಂದು ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ನಡೆದ ಈ ಕೊಲೆ ರಾಜ್ಯವನ್ನು ಬೆಚ್ಚಿ ಬೀಳಿಸಿತ್ತು.ಆರಂಭಿಕ ಚಾರ್ಜ್‌ಶೀಟನ್ನು 2023 ಜನವರಿ 20 ರಂದು NIA ಸಲ್ಲಿಸಿತ್ತು. PFI ಹಲವರನ್ನು ಹತ್ಯೆಗೈಯಲು ರಹಸ್ಯ ಹಿಟ್ ಸ್ಕ್ವಾಡ್‌ಗಳನ್ನು (ಕಿಲ್ಲರ್ ಸ್ಕ್ವಾಡ್‌) ರಚಿಸಿದೆ ಎಂದು NIA ನಂತರ ಹೇಳಿತ್ತು.

ಆರೋಪಿ ಮಹಮ್ಮದ್ ಜಬೀರ್ ಪಿಎಫ್‌ಐ ಪುತ್ತೂರು ಜಿಲ್ಲಾಧ್ಯಕ್ಷನಾಗಿದ್ದು, ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಚು ರೂಪಿಸಿದ್ದ ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ. ಮಸೂದ್ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಹೇಳಿ ಪ್ರಚೋದನಕಾರಿ ಭಾಷಣವನ್ನೂ ಮಾಡಿದ್ದ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 2022 ಜುಲೈ 27 ರಂದು ಎಫ್‌ಐಆರ್ ಮತ್ತು 4 ಆಗಸ್ಟ್ 2022 ರಂದು NIA ಯಿಂದ ಮರು ನೋಂದಣಿಯಾದ ಪ್ರಕರಣಗಳ ತನಿಖೆಗಳು ಮುಂದುವರೆದಿದೆ.

Scroll to Top