ಬ್ರಹ್ಮಾವರ: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ ನಿಂದ ಚಿನ್ನದ ಸರ ಕಳವು

ಬ್ರಹ್ಮಾವರ ಮೇ.07: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ಬ್ಯಾಗ್‌ನಲ್ಲಿ ಇಟ್ಟಿದ್ದ ಚಿನ್ನದ ಸರ ಕಳವಾಗಿರುವ ವಿಚಾರವಾಗಿ ಸೀಟು ಬಿಟ್ಟು ಕೊಟ್ಟಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ಆಕೆಯ ವಿರುದ್ಧ ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಾಗಿದೆ.

ಬ್ರಹ್ಮಾವರದ ಹೊಸಾಳ ಗ್ರಾಮದ ರಾಧಿಕಾ ಶೆಟ್ಟಿ ಅವರು ಮೇ.5 ರಂದು ತಮ್ಮ ತಾಯಿ ಯಶೋಧ ಹಾಗೂ ಮಗಳು ತನ್ನಿ ಯೊಂದಿಗೆ ಬೆಳಿಗ್ಗೆ 10:00 ಗಂಟೆಗೆ ಹೇರಾಡಿ ಬಸ್ ನಿಲ್ದಾಣದಿಂದ ಬಸ್ಸಿನಲ್ಲಿ ಬ್ರಹ್ಮಾವರಕ್ಕೆ ಪ್ರಯಾಣಿಸುತ್ತಿದ್ದರು. ಬಸ್ಟ್ ರಷ್ ಇದ್ದುದರಿಂದ ಯಶೋಧರವರು ಧರಿಸಿದ್ದ ಚಿನ್ನದ ಚೈನ್ ಅನ್ನು ತನ್ನ ಕೈಯಲ್ಲಿದ್ದ ಸಣ್ಣ ಬ್ಯಾಗ್ ನಲ್ಲಿ ಹಾಕಿ ಝಿಪ್ ಹಾಕಿದ್ದರು. ಯಶೋಧರವರು ನಿಂತುಕೊಂಡಿದ್ದನ್ನು ನೋಡಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪರಿಚಿತ ಮಹಿಳೆಯೊಬ್ಬಳು ತನ್ನ ಸೀಟನ್ನು ಬಿಟ್ಟು ಯಶೋಧರವರಿಗೆ ಕುಳಿತುಕೊಳ್ಳಲು ಹೇಳಿದ್ದಳು. ಹಾಗೂ ಆಕೆಯು ಯಶೋಧರವರ ಪಕ್ಕದಲ್ಲಿ ನಿಂತುಕೊಂಡು, ಅವಳ ಕೈಯಲ್ಲಿದ್ದ ಒಂದು ಬ್ಯಾಗನ್ನು ಯಶೋಧರವರಿಗೆ ಹಿಡಿದುಕೊಳ್ಳಲು ಕೊಟ್ಟಿದ್ದಳು. ನಂತರ ಬ್ರಹ್ಮಾವರ ಬಸ್ ನಿಲ್ದಾಣಕ್ಕೆ ಬಂದು ಇಳಿಯುವ ಮೊದಲು ಯಶೋಧ ರವರು ಅವರ ಕೈಯಲ್ಲಿದ್ದ ಮಹಿಳೆಯ ಬ್ಯಾಗನ್ನು ಅವಳಿಗೆ ವಾಪಾಸ್ಸು ಕೊಟ್ಟಿದ್ದರು.

ಆದರೆ ಆ ನಂತರ ಯಶೋಧ ಹಾಗೂ ಮಗಳ ಜೊತೆ ಬ್ರಹ್ಮಾವರ ಬಸ್ ನಿಲ್ದಾಣಕ್ಕೆ ಬಂದು ಇಳಿದು ಸ್ವಲ್ಪ ಮುಂದೆ ಹೋಗಿ ತಾಯಿ ಯಶೋಧರವರ ಕೈಯಲ್ಲಿದ್ದ ಬ್ಯಾಗನ್ನು ನೋಡುವಾಗ ಅದರ ಝಿಪ್ ಓಪನ್ ಆಗಿದ್ದು, ಅದರಲ್ಲಿಟ್ಟಿದ ಚಿನ್ನದ ಸರ ಇಲ್ಲದೆ ಇರುವುದು ಕಂಡು ಬಂದಿದೆ. ಅದರಂತೆ ಬಸ್ಸಿನಲ್ಲಿ ಯಶೋಧರವರಿಗೆ ಕುಳಿತುಕೊಳ್ಳಲು ಸೀಟು ಬಿಟ್ಟುಕೊಟ್ಟ ಮಹಿಳೆಯೇ ತಾಯಿಯ ಬ್ಯಾಗಿನ ಜೀಪ್ ಅನ್ನು ತೆರೆದು ಅದರ ಒಳಗಿದ್ದ ಸುಮಾರು 2.5 ಪಾವನಿನ ರೂ. 80,000 ಮೌಲ್ಯದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದಾಳೆ, ಹಾಗೂ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಂಡು ಚಿನ್ನದ ಸರವನ್ನು ಪತ್ತೆ ಮಾಡಿಕೊಡುವಂತೆ ರಾಧಿಕಾ ಶೆಟ್ಟಿ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Baravanige News

Translate »

You cannot copy content from Baravanige News

Scroll to Top