2022-23ನೇ ಸಾಲಿನ ಕರ್ನಾಟಕ ಎಸ್ಎಸ್ಎಲ್ ಸಿ ವಾರ್ಷಿಕ ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ.
ಕರ್ನಾಟಕ ಶಾಲಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಇಂದು(ಮೇ 08) ಸುದ್ದಿಗೋಷ್ಠಿ ನಡೆಸಿ ಫಲಿತಾಂಶವನ್ನು ಪ್ರಕಟಿಸಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮಚಂದ್ರ, ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದ್ದು, ಈ ಬಾರಿ ಶೇ. 83.89 ಫಲಿತಾಂಶ ಬಂದಿದೆ.
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಸಾದ ಒಟ್ಟು ವಿದ್ಯಾರ್ಥಿಗಳು 7,00,619. ಈ ಪೈಕಿ 3,41,108 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರೆ, 3,59,511 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಒಟ್ಟು ನಾಲ್ಕು ವಿದ್ಯಾರ್ಥಿಗಳು ಒಟ್ಟು 625 ಅಂಕಕ್ಕೆ 625 ಅಂಕ ಪಡೆದುಕೊಂಡಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕರ್ನಾಟಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್‍ಸೈಟ್ karresults.nic.in ನಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟವಾಗಲಿದೆ.
ಎಸ್‍ಎಸ್‍ಎಲ್‍ಸಿ ಪರೀಕ್ಷೆಗಳನ್ನು 2023 ಮಾರ್ಚ್ 31 ರಿಂದ ಏಪ್ರಿಲ್ 15ರವರೆಗೆ ಕೈಗೊಳ್ಳಲಾಗಿದ್ದು ಒಟ್ಟು ರಾಜ್ಯದ 15,498 ಪ್ರೌಢಶಾಲೆಗಳ 8.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿಯಾಗಿದ್ದರು. ರಾಜ್ಯಾದ್ಯಂತ ಒಟ್ಟು 3,305 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆದಿದ್ದವು. ಬಂದ ಉತ್ತರ ಪತ್ರಿಕೆಗಳನ್ನು ತಿದ್ದಲು 63 ಸಾವಿರ ಶಿಕ್ಷಕರು ಮೌಲ್ಯಮಾಪನ ಕಾರ್ಯದಲ್ಲಿ ಭಾಗವಹಿಸಿದ್ದರು.