ಕಟಪಾಡಿ ಪೇಟೆಯಲ್ಲಿ ಸೊರಕೆ ಬಹಿರಂಗ ಪ್ರಚಾರ ಸಮಾರೋಪ

ಕಟಪಾಡಿ : ಕಾಪು ಕ್ಷೇತ್ರದಲ್ಲಿ ಕಾರ್ಯಕರ್ತರ ಉತ್ಸಾಹದಿಂದ ವಿದ್ಯುತ್‌ ಸಂಚಾರವಾಗಿದೆ. ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡಿದ್ದು ಪಕ್ಷಕ್ಕೆ ಹೊಸ ಶಕ್ತಿ ತುಂಬಿದಂತಾಗಿದೆ. ಈ ಉತ್ಸಾಹವನ್ನು ಮೇ 10ರ ಚುನಾವಣೆಯವರೆಗೂ ಉಳಿಸಿಕೊಳ್ಳ‌ಬೇಕಿದೆ. ನನ್ನ ಕೊನೆಯ ಚುನಾವಣೆಯಲ್ಲಿ ಗೆಲ್ಲಿಸುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲು ಅವಕಾಶ ಮಾಡಿಕೊಡುವಂತೆ ಕಾಂಗ್ರೆಸ್‌ ಅಭ್ಯರ್ಥಿ ವಿನಯ ಕುಮಾರ್‌ ಸೊರಕೆ ಮತದಾರರಲ್ಲಿ ಭಾವುಕರಾಗಿ ಮನವಿ ಮಾಡಿದರು.

ಸೋಮವಾರ ಕಾಪು ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಕಟಪಾಡಿ ಪೇಟೆಯಲ್ಲಿ ಜರಗಿದ ಚುನಾವಣಾ ಬಹಿರಂಗ ಪ್ರಚಾರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಸರಕಾರ ಬಂದ ದಿನವೇ ಗ್ಯಾರಂಟಿ ಕಾರ್ಡ್‌ ಜಾರಿ : ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಚಾಚು ತಪ್ಪದೆ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತೇವೆ ಎಂದು ಈ ಮೂಲಕ ವಾಗ್ಧಾನ ನೀಡುತ್ತೇವೆ. ಗ್ಯಾರಂಟಿ ಕಾರ್ಡ್‌ನಲ್ಲಿ ತಿಳಿಸಿದಂತೆ ಫಲಾನುಭವಿ ಮಹಿಳೆಯರ‌ ಖಾತೆಗೆ ಎರಡು ಸಾವಿರ ರೂ., ಹತ್ತು ಕೆಜಿ ಉಚಿತ ಅಕ್ಕಿ, 200 ಯುನಿಟ್‌ ಉಚಿತ ವಿದ್ಯುತ್‌, ಮಹಿಳೆಯರಿಗೆ ಕೆಎಸ್‌ಆರ್‌ಟಿಸಿ ಪ್ರಯಾಣ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರ ಬೇಡಿಕೆ ಈಡೇರಿಸುತ್ತೇವೆ. ಗ್ಯಾರಂಟಿ ಕಾರ್ಡ್‌ ಮನೆ ಮನೆಗೆ ಕೊಟ್ಟಿದ್ದೇವೆ. ಸರಕಾರ ಆಡಳಿತಕ್ಕೆ ಬಂದ ದಿನವೇ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಸೊರಕೆ ಹೇಳಿದರು.



ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು ಮಾತನಾಡಿ, ಬಿಜೆಪಿ ಸರಕಾರದ ಜನ ವಿರೋಧಿ ನೀತಿಯಿಂದಾಗಿ ಜನರು ಬೇಸತ್ತಿದ್ದಾರೆ. ರಾಜ್ಯ ಸರಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ಮುಳುಗಿದೆ. ಇಂತಹ ಸರಕಾರದಿಂದ ಅಭಿವೃದ್ಧಿ ಎಂದಿಗೂ ಸಾಧ್ಯವಿಲ್ಲ. ಕಾಂಗ್ರೆಸ್‌ ಪಕ್ಷವು ಬಡವರು, ರೈತರು, ಮೀನುಗಾರರ ಪರವಾಗಿದೆ. ಜನರ ಎಲ್ಲ ಬೇಡಿಕೆ ಈಡೇರಿಸಲು ಕಾಂಗ್ರೆಸ್‌ ಬದ್ಧವಾಗಿದೆ. ಕಾಪು ಕ್ಷೇತ್ರದ ಮಾದರಿ ಅಭಿವೃದ್ಧಿಗೆ ವಿನಯ ಕುಮಾರ್‌ ಸೊರಕೆ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಹೇಳಿದರು.

ಕೆಪಿಸಿಸಿ ದೇವಿಪ್ರಸಾದ್‌ ಶೆಟ್ಟಿ ಬೆಳಪು ಮಾತನಾಡಿ, ವಿನಯ ಕುಮಾರ್‌ ಸೊರಕೆ ಅವರು ಶಾಸಕರಾಗಿದ್ದ ವೇಳೆ ಗ್ರಾಮೀಣ ರಸ್ತೆ ಅಭಿವೃದ್ಧಿ, ಕುಡಿಯುವ ನೀರು ಸಹಿತ ಮೂಲಸೌಕರ್ಯಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ಒದಗಿಸಿದ್ದರು. ಅವರು ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಸ್ಪಷ್ಟ ದೂರದೃಷ್ಟಿತ್ವವನ್ನು ಹೊಂದಿದ್ದು ಜನರಿಗಾಗಿ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರಲು ನಾವೆಲ್ಲರೂ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕರೆ ನೀಡಿದರು.

ರಾಜ್ಯವನ್ನು ಲೂಟಿ ಮಾಡಿದ ಬಿಜೆಪಿ
ಅಭಿವೃದ್ಧಿ ಕೆಲಸ ಮಾಡದೇ ಭ್ರಷ್ಟಾಚಾರದ ಮೂಲಕ ರಾಜ್ಯವನ್ನು ಲೂಟಿ ಮಾಡಿದ ಬಿಜೆಪಿ ಪಕ್ಷವು ಕೇರಳ ಸ್ಟೋರಿ ಸಿನಿಮಾ ನೋಡಿ ಎಂದು ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ ಎಂದು ಬಿಜೆಪಿ ವಿರುದ್ದ ಗುಡುಗಿದರು. ಬಿಜೆಪಿ ಕಾಪುವಿಗೆ ಮಹಾರಾಷ್ಟ್ರ ಸಿಎಂ ಅವರನ್ನು ಕರೆಸಿದೆ. ಅವರು ತನಗೆ ಅನ್ನ ಕೊಟ್ಟ ಪಕ್ಷವನ್ನು ನಿರ್ನಾಮ ಮಾಡಿದವರು. ಅವರಿಂದ ಪ್ರಚಾರ ಮಾಡಿಸುವ ಕೆಲಸಕ್ಕೆ ಬಿಜೆಪಿ ಇಳಿದಿರುವುದು ದುರ್ದೈವವಾಗಿದೆ ಎಂದು ಸೊರಕೆ ಟೀಕಿಸಿದರು.

ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಒತ್ತು
ಎಐಸಿಸಿ ನಾಯಕ ರಾಹುಲ್‌ ಗಾಂಧಿ ಅವರು ಮೀನುಗಾರರ ಬಗ್ಗೆ ಕಾಳಜಿಯಿಂದ ಮೀನುಗಾರರ ಜತೆ ಸಂವಾದ ಮಾಡಿ ಮೀನುಗಾರರ ಕಷ್ಟಗಳನ್ನು ಕೇಳಿದರು. ಈ ಮೂಲಕ ಮೀನುಗಾರಿಕಾ ವೃತ್ತಿಗೆ ಪ್ರೇರಣೆ ನೀಡುವ ಪ್ರಯತ್ನ ನಡೆಸಿದ್ದಾರೆ. ಕರಾವಳಿ ಪ್ರಣಾಳಿಕೆಯಲ್ಲಿ ಮೀನುಗಾರಿಕೆ ಸಹಿತ ಅನೇಕ ಪೂರಕ ಯೋಜನೆಗಳಿಗೆ ಆದ್ಯತೆ ನೀಡಲಾಗಿದೆ. ಕಾಪು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು. ಉದ್ಯೋಗ ಸƒಷ್ಟಿ, ಪ್ರವಾಸೋದ್ಯಮಕ್ಕೆ ಒತ್ತು ನೀಡುವುದರ ಜತೆಗೆ ಎಲ್ಲ ಜಾತಿ, ಧರ್ಮಗಳ ನಡುವೆ ಅನ್ಯೋನ್ಯತೆ ಕಾಪಾಡಲು ಕಾರ್ಯಕ್ರಮ ಯೋಜನೆ ಮಾಡಲಾಗುವುದು. ಗ್ರಾಮೀಣ ಭಾಗದ ಬಸ್‌ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿನಯ ಕುಮಾರ್‌ ಸೊರಕೆ ಹೇಳಿದರು.

ಹದಿನೈದು ದೇವಸ್ಥಾನಗಳ ಜೀರ್ಣೋದ್ಧಾರ
ಇಷ್ಟು ವರ್ಷ ಆಡಳಿತ ಮಾಡಿದರೂ ಬಿಜೆಪಿಗೆ ತಾನು ಮಾಡಿದ ಅಭಿವೃದ್ಧಿ ಕೆಲಸಗಳ ಬಗ್ಗೆ ಹೇಳಿಕೊಳ್ಳಲು ಆಗುತ್ತಿಲ್ಲ. ಕ್ಷೇತ್ರದ ದೇವಸ್ಥಾನಗಳಿಗೆ ಐದು ಪೈಸೆ ಅನುದಾನ ನೀಡಲು ಇವರಿಂದ ಸಾಧ್ಯವಾಗಿಲ್ಲ. ನಾನು ಶಾಸಕನಾಗಿದ್ದ ಅವಧಿಯಲ್ಲಿ ಹದಿನೈದಕ್ಕೂ ಅಧಿಕ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಅನುದಾನ ಒದಗಿಸಿದ್ದೇನೆ. ದೇವರು ಧರ್ಮದ ಹೆಸರಲ್ಲಿ ಕಾಂಗ್ರೆಸ್‌ ವಿರುದ್ಧ ನಿರಂತರ ಅಪಪ್ರಚಾರ ಮಾಡುವ ಕೆಲಸ ಮಾಡುವ ಬಿಜೆಪಿಗೆ ಒಂದೇ ಒಂದು ದೇವಸ್ಥಾನದ ಜೀರ್ಣೋದ್ಧಾರ ನಡೆಸಲು ಸಾಧ್ಯವಾಗಿಲ್ಲ ಎಂದು ವಿನಯ ಕುಮಾರ್‌ ಸೊರಕೆ ಹೇಳಿದರು.

ಕೆಪಿಸಿಸಿ ಕಾರ್ಯದರ್ಶಿಗಳಾದ ಎಂ.ಎ. ಗಫೂರ್‌, ರಾಜಶೇಖರ ಕೋಟ್ಯಾನ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ರಾಕೇಶ್‌ ಮಲ್ಲಿ, ಸರಸು ಡಿ. ಬಂಗೇರ, ನವೀನ್‌ಚಂದ್ರ ಶೆಟ್ಟಿ, ಕಾಪು ದಿವಾಕರ ಶೆಟ್ಟಿ, ಶಿವಾಜಿ ಸುವರ್ಣ, ರಮೀಜ್‌ ಪಡುಬಿದ್ರಿ, ಜಿತೇಂದ್ರ ಪುರ್ಟಾಡೋ, ವಿಕ್ರಂ ಕಾಪು, ಶರ್ಪುದ್ದೀನ್‌ ಶೇಖ್‌, ವೈ. ಸುಧೀರ್‌ ಕುಮಾರ್‌, ವಿನಯ ಬಲ್ಲಾಳ್‌, ಅಖೀಲೇಶ್‌ ಕೋಟ್ಯಾನ್‌, ಗುಲಾಂ ಮಹಮ್ಮದ್‌, ಶ್ರೀಕರ ಅಂಚನ್‌, ಕಿಶೋರ್‌ ಕುಮಾರ್‌, ಪ್ರಶಾಂತ ಜತ್ತನ್ನ, ಅಬ್ದುಲ್‌ ಅಜೀಜ್‌, ಸುನೀಲ್‌ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.

Scroll to Top