ಮಂಗಳೂರು, ಮೇ.13: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ಕರಾವಳಿ ಕರ್ನಾಟಕದಲ್ಲಿ ನಿರೀಕ್ಷೆಯಂತೆಯೇ ಬಿಜೆಪಿ ಮುನ್ನಡೆ ಸಾಧಿಸಿದೆ. ಆದರೆ, ಹಿಂದುತ್ವದ ಪ್ರಬಲ ಕೋಟೆ ಎಂದು ಹೇಳಲಾಗಿದ್ದ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ತವರು ನೆಲ ಪುತ್ತೂರಿನಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಅರುಣ್ ಕುಮಾರ್ ಪುತ್ತಿಲ ಪಕ್ಷೇತರನಾಗಿ ಕಣಕ್ಕಿಳಿದ ಪರಿಣಾಮ ಕಮಲ ಪಾಳಯ ಮೂರನೇ ಸ್ಥಾನಕ್ಕೆ ಕುಸಿಯುವಂತಾಗಿದೆ. ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ಹಾಗೂ ಪುತ್ತಿಲ ಮಧ್ಯೆ ಜಿದ್ದಾಜಿದ್ದಿಯ ಪೈಪೋಟಿ ಏರ್ಪಟ್ಟಿದ್ದು, ಕೊನೆಯ ಸುತ್ತಿನ ವೇಳೆಗೆ ಕಾಂಗ್ರೆಸ್ನ ಅಶೋಕ್ ರೈ ಗೆಲುವಿನ ನಗೆ ಬೀರಿದ್ದಾರೆ.
ಉಳಿದಂತೆ ಮಂಗಳೂರು ದಕ್ಷಿಣ, ಉತ್ತರ, ಮೂಡಬಿದಿರೆ, ಬಂಟ್ವಾಳ, ಬೆಳ್ತಂಗಡಿ, ಸುಳ್ಯ, ಉಡುಪಿ, ಕಾಪು, ಕುಂದಾಪುರ, ಕಾರ್ಕಳ, ಬೈಂದೂರಿನಲ್ಲಿ ಮತದಾರ ಬಿಜೆಪಿಯ ಕೈಹಿಡಿದಿದ್ದಾನೆ.
ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥ ವೇದವ್ಯಾಸ ಕಾಮತ್ ಜಯಭೇರಿ ಬಾರಿಸಿದ್ದಾರೆ. ಮಂಗಳೂರಿ ಉತ್ತರದಲ್ಲಿ ಬಿಜೆಪಿಯ ಡಾ. ಭರತ್ ಶೆಟ್ಟಿ, ಮೂಡಬಿದಿರೆಯಲ್ಲಿ ಬಿಜೆಪಿಯ ಉಮಾನಾಥ ಕೋಟ್ಯಾನ್, ಬಂಟ್ವಾಳದಲ್ಲಿ ರಾಜೇಶ್ ನಾಯಕ್, ಬೆಳ್ತಂಗಡಿಯಲ್ಲಿ ಹರೀಶ್ ಪೂಂಜ, ಸುಳ್ಯದಲ್ಲಿ ಭಾಗೀರಥಿ ಮುರುಳ್ಯ ಗೆಲುವಿನ ಹಾದಿಯಲ್ಲಿದ್ದರೆ ಉಳ್ಳಾಲದಲ್ಲಿ ಕಾಂಗ್ರೆಸ್ನ ಯುಟಿ ಖಾದರ್ ಗೆಲುವಿನ ನಗೆ ಬೀರಿದ್ದಾರೆ.
ಇನ್ನು ಉಡುಪಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಬಿಜೆಪಿಯ ಗೆಲುವು ಖಚಿತಗೊಂಡಿದೆ. ಉಡುಪಿ, ಕಾಪು, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನಲ್ಲಿ ಕ್ರಮವಾಗಿ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ಕುಮಾರ್ ಕೊಡ್ಗಿ, ವಿ. ಸುನಿಲ್ ಕುಮಾರ್ ಹಾಗೂ ಗುರುರಾಜ್ ಶೆಟ್ಟಿ ಗಂಟಿಹೊಳೆ ಗೆಲುವು ಸಾಧಿಸಿದ್ದಾರೆ.