ಮಂಗಳೂರು: ಬಂಟ್ವಾಳದಲ್ಲಿ ನನಗೆ ಸಣ್ಣ ಅಂತರದ ಸೋಲಾಗಿದೆ. ನನಗಿಂತಲೂ ಪಕ್ಷದಲ್ಲಿ ಹಿರಿಯರಿದ್ದಾರೆ. ಆದರೆ ನನಗೆ ವಯಸ್ಸಾಯಿತೆಂದು ನನ್ನ ಸ್ಪರ್ಧೆಗೆ ನಮ್ಮಲ್ಲಿ ಅಪಸ್ವರ ಬಂತು. ಹಾಗಾಗಿ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯೋ ನಿರ್ಧಾರಕ್ಕೆ ಬಂದಿದ್ದೇನೆ ಎಂದು ಮಾಜಿ ಸಚಿವ ರಮಾನಾಥ್ ರೈ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಗೆ ದ.ಕ ಜಿಲ್ಲೆಯಲ್ಲಿ ಹಿನ್ನಡೆಯಾಗಿದೆ. ಗೆದ್ದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಾಂಗ್ರೆಸ್ ಮೇಲೆ ವಿಶ್ವಾಸವನ್ನಿಟ್ಟು ಜನ ಮತ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋತರೂ ರಾಜ್ಯದಲ್ಲಿ ಸರ್ಕಾರ ನಮ್ಮದೇ ಇದೆ. ಜಿಲ್ಲೆಯಲ್ಲಿ ಕಾರ್ಯಕರ್ತರು ಎದೆಗುಂದಬಾರದು. ನಾನು ಕಡೆಯ ಬಾರಿ ಚುನಾವಣೆ ಸ್ಪರ್ಧೆ ಮಾಡೋದಾಗಿ ಹೇಳಿದ್ದೆ. ಚುನಾವಣಾ ರಾಜಕೀಯದಿಂದ ದೂರವಿದ್ದರೂ ಪಕ್ಷದ ಕಾರ್ಯಕ್ರಮದಲ್ಲಿ ಮುಂಚೂಣಿಯಲ್ಲಿರುತ್ತೇನೆ ಎಂದು ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನವನ್ನು ರಾಜ್ಯದಲ್ಲಿ ಕಾಂಗ್ರೆಸ್ ಗಳಿಸಲಿದೆ. ಗ್ಯಾರಂಟಿ ಕಾರ್ಯಕ್ರಮ ಪ್ರಮಾಣವಚನ ಸ್ವೀಕಾರವಾದ ತಕ್ಷಣ ಅನುಷ್ಠಾನಕ್ಕೆ ಬರಲಿದೆ. ಕಾಂಗ್ರೆಸ್‍ನ ಯೋಜನೆಗಳು ದಕ್ಷಿಣ ಕನ್ನಡ ಜಿಲ್ಲೆಗೆ ಹೆಚ್ಚು ಪ್ರಯೋಜನ ತಂದಿದೆ ಎಂದರು.
ಪಾರ್ಟಿ ವಿರುದ್ಧ ನಾನು ಈವರೆಗೂ ಒಂದು ಶಬ್ದದ ಅಪಸ್ವರವನ್ನು ಎತ್ತಿಲ್ಲ. ಪಕ್ಷದ ಋಣವನ್ನು ಜೀವನ ಪರ್ಯಂತ ತೀರಿಸುತ್ತೇನೆ. ಸೋಲಿನ ಅವಲೋಕನವನ್ನು ಮಾಡಿದ್ದೇನೆ. ಚುನಾವಣೆ ಅನ್ನೋದು ನಾವು ಗ್ರಹಿಸಿದ ರೀತಿ ಅಗೋದಿಲ್ಲ. ಚುನಾವಣೆ ಗೆಲ್ಲುವ ವಿಶ್ವಾಸದಲ್ಲಿದ್ದೆ, ಸಮೀಕ್ಷೆಗಳೂ ಗೆಲ್ಲುವ ರೀತಿ ಇತ್ತು. ಸೋಲಿನ ಬಗ್ಗೆ ಅವಲೋಕನ ಮಾಡುತ್ತಿದ್ದೇನೆ. ಮಂಗಳೂರು, ಪುತ್ತೂರು ಹೊರತುಪಡಿಸಿ ಬೇರೆ ಎಲ್ಲಾ ಕಡೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.