ಬೆಂಗಳೂರು : ರಾಜ್ಯದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಅವರ ಹೆಸರನ್ನು ಘೋಷಿಸುವುದು ಬಹುತೇಕ ಪಕ್ಕಾ ಆಗಿದೆ. ಇನ್ನೊಂದೆಡೆ ಹಲವು ವರ್ಷಗಳ ಬಳಿಕ ಕಾಂಗ್ರೆಸ್ಗೆ ಪ್ರಚಂಡ ಗೆಲುವು ಹಾಗೂ ದೊಡ್ಡ ಮಟ್ಟದಲ್ಲಿ ಸೀಟು ಬಂದಿವೆ. ಹೀಗಾಗಿ ಸಿಎಂ ಪ್ರಮಾಣವಚನ ಸಮಾರಂಭವನ್ನು ಅದ್ಧೂರಿಯಾಗಿ ಮಾಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.
ಮೇ 18ರ ನಾಳೆ ಮಧ್ಯಾಹ್ನ 3.30ಕ್ಕೆ ಪ್ರಮಾಣ ವಚನ ಕಾರ್ಯಕ್ರಮಕ್ಕೆ ತಯಾರಿ ನಡೆದಿದೆ. ವಿಧಾನಸೌಧ ಮುಂಭಾಗ ಅಥವಾ ಕಂಠೀರವ ಸ್ಟೇಡಿಯಂನಲ್ಲಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ನಾಳೆ ತಪ್ಪಿದರೆ ಶನಿವಾರ ಅಂದರೆ ಮೇ 20ರಂದು ಕಾರ್ಯಕ್ರಮ ನಿಗದಿ ಮಾಡುವ ಬಗ್ಗೆ ಕಾಂಗ್ರೆಸ್ನಲ್ಲಿ ಚರ್ಚೆ ನಡೆದಿದೆ. ಶುಕ್ರವಾರ(ಮೇ 19) ಅಮಾವಾಸ್ಯೆ ಇರುವ ಹಿನ್ನಲೆ ಪ್ರಮಾಣ ವಚನ ಬೇಡ ಎಂಬ ಬಗ್ಗೆ ಕೆಲವರ ಸಲಹೆ ನೀಡಿದ್ದಾರೆ
ಇನ್ನು ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಸಿದ್ದರಾಮಯ್ಯ ಅವರನ್ನೇ ಮೊದಲು ಸಿಎಂ ಮಾಡಲು ಹೈಕಮಾಂಡ್ ತೀರ್ಮಾನಿಸಿದೆ ಎನ್ನಲಾಗಿದೆ. ಡಿಕೆ ಶಿವಕುಮಾರ್ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ. ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರಿಯಲಿದ್ದಾರೆ. ಅಧ್ಯಕ್ಷ ಹುದ್ದೆ ಜೊತೆ ಎರಡು ಪ್ರಮುಖ ಖಾತೆಗಳಿಗೆ ಡಿಕೆಶಿ ಆಯ್ಕೆ ಮಾಡುವ ಸಾಧ್ಯತೆ ಇದ್ದು ಎಲ್ಲವೂ ಅಂದುಕೊಂಡತೆ ಆದರೆ ನಾಳೆ ಇವರಿಬ್ಬರೂ ಜೊತೆಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ.