ಸಿಎಂ ಆಯ್ಕೆ ಇನ್ನೂ ಅಂತಿಮವಾಗಿಲ್ಲ; ಸುಳ್ಳು ಸುದ್ದಿಗಳಿಗೆ ಕಿವಿಗೊಡಬೇಡಿ – ಸುರ್ಜೇವಾಲ ಸ್ಪಷ್ಟನೆ

ನವದೆಹಲಿ/ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ. ಅಂತಿಮವಾಗಿ ಇನ್ನೂ ಸಿಎಂ ಆಯ್ಕೆ ಆಗಿಲ್ಲ. ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಎದುರು ಮಾತನಾಡಿದ ಅವರು, ಸದ್ಯ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಸಮಾಲೋಚನೆ ನಡೆಯುತ್ತಿದೆ. ಕಾಂಗ್ರೆಸ್ ನಿರ್ಧಾರ ಕೈಗೊಂಡಾಗ ನಾವು ತಿಳಿಸುತ್ತೇವೆ. ಇನ್ನು 48-72 ಗಂಟೆಗಳಲ್ಲಿ ಕರ್ನಾಟಕದಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಲಿದೆ ಎಂದು ಹೇಳಿದ್ದಾರೆ.

ಸಿಎಂ ಆಯ್ಕೆ ವಿಚಾರವಾಗಿ ಈಗ ಹರಿದಾಡುತ್ತಿರುವುದು ಸುಳ್ಳು ಸುದ್ದಿ ಎಂದ ಸುರ್ಜೇವಾಲ, ಶಾಸಕಾಂಗ ಪಕ್ಷದ ನಾಯಕರು ಯಾರು ಎಂಬುದು ಇನ್ನೂ ಅಂತಿಮವಾಗಿಲ್ಲ. ಇಂದು ಅಥವಾ ನಾಳೆ ಮುಖ್ಯಮಂತ್ರಿ ಯಾರು ಎಂಬ ಬಗ್ಗೆ ಎಐಸಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಆದರೆ ನಾಳೆ ಪ್ರಮಾಣವಚನ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಸಿದ್ದರಾಮಯ್ಯ ಅವರನ್ನೇ ಸಿಎಂ ಎಂದು ಅಂತಿಮಗೊಳಿಸಲಾಗಿದೆ ಎಂದು ಅನೇಕರು ಹೇಳಿದ್ದರು. ಹಲವೆಡೆ ಸಿದ್ದು ಅಭಿಮಾನಿಗಳು ಸಂಭ್ರಮಾಚರಣೆ ಕೂಡ ಮಾಡಿದ್ದರು. ಆದರೆ ಸುರ್ಜೇವಾಲ ಅವರು ಇದಕ್ಕೆಲ್ಲ ಬ್ರೇಕ್‌ ಹಾಕಿದ್ದಾರೆ.

Scroll to Top