ದ.ಕ ಬಿಜೆಪಿ ನಾಯಕರಿಗೆ ಶ್ರದ್ದಾಂಜಲಿ ಬ್ಯಾನರ್ ಅಳವಡಿಸಿದ ಪ್ರಕರಣ; ಆರೋಪಿಗಳ ಮೇಲಿನ ದೌರ್ಜನ್ಯ ಖಂಡಿಸಿದ ನಳಿನ್ ಕುಮಾರ್

ಮಂಗಳೂರು, ಮೇ 17: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಸಂಸದ ಡಿವಿ ಸದಾನಂದ ಗೌಡ ಅವರ ಬ್ಯಾನರ್​ಗೆ ಚಪ್ಪಲಿ ಹಾರ ಹಾಕಿದ ಪ್ರಕರಣದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಈ ನಡುವೆ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯದ ಆರೋಪ ಕೇಳಿಬಂದಿದ್ದು, ಇದನ್ನು ಸ್ವತಃ ನಳಿನ್ ಕುಮಾರ್ ಅವರೇ ಖಂಡಿಸಿದ್ದಾರೆ.

ಆರೋಪಿಗಳ ಮೇಲೆ ಪೊಲೀಸರು ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿ ಕೊನೆಗೂ ನಳಿನ್ ಕುಮಾರ್ ಕಟೀಲ್ ಮೌನ ಮುರಿದಿದ್ದಾರೆ. ಪ್ರಕರಣದಲ್ಲಿ ಪೊಲೀಸರು ನಡೆದುಕೊಂಡಿರುವ ರೀತಿಯನ್ನು ಖಂಡಿಸಿ ಟ್ವೀಟ್ ಮಾಡಿರುವ ಅವರು, ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

‘ಹಿಂದೂ ಯುವಕರ ಮೇಲೆ ಪುತ್ತೂರಿನಲ್ಲಿ ದಾಖಲಾದ ಪ್ರಕರಣದಲ್ಲಿ ಪೊಲೀಸರ ವರ್ತನೆ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆ. ದೂರಿನ ಬಗ್ಗೆ ಪರಿಶೀಲಿಸಿ ಯಥೋಚಿತ ತನಿಖೆ ನಡೆಸುವ ಬದಲು ಚಿತ್ರಹಿಂಸೆ ನೀಡಿರುವುದನ್ನು ಖಂಡಿಸುತ್ತೇನೆ. ಉನ್ನತ ಪೊಲೀಸ್ ಅಧಿಕಾರಿಗಳು ತಪ್ಪಿತಸ್ಥ ಅಧಿಕಾರಿಗಳ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು’ ಎಂದು ಕಟೀಲ್ ಟ್ವೀಟ್ ಮಾಡಿದ್ದಾರೆ.

Scroll to Top