ಹಲ್ಲೆ ಮಾಡಲು ಯಾರಿಗೂ ಅಧಿಕಾರವಿಲ್ಲ: ಪುತ್ತೂರಿನ ಪ್ರಕರಣ ಖಂಡಿಸಿದ ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಇಡೀ ರಾಜ್ಯಾದ್ಯಂತ ಸುದ್ದು ಮಾಡುತ್ತಿರುವ ಪುತ್ತೂರಿನ ಹಿಂದೂ ಕಾರ್ಯಕರ್ತರ ಮೇಲಿನ ಪೊಲೀಸರ ಹಲ್ಲೆಯನ್ನು ಖಂಡಿಸಿದ ಮಾಜಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಕಾನೂನು ಕ್ರಮ ತೆಗೆದುಕೊಳ್ಳಿ ಹಲ್ಲೆ ಮಾಡಲು ಯಾರಿಗೂ ಅಧಿಕಾರವಿಲ್ಲ. ಬಿಜೆಪಿ ಇದನ್ನು ಖಂಡಿಸಿದೆ ತನಿಖೆ ಮಾಡಲು ಆಗ್ರಹಿಸಿದೆ. ಹಲ್ಲೆ ಮಾಡುವ ಮತ್ತು ದೌರ್ಜನ್ಯ ಮಾಡುವ ಅಧಿಕಾರ ಯಾರಿಗೂ ಇಲ್ಲ. ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂಬ ಅಗ್ರಹವನ್ನು ಬಿಜೆಪಿ ಮಾಡಿದೆ. ಜಿಲ್ಲಾ ಮಟ್ಟದಲ್ಲಿ ತನಿಖೆ ಮಾಡುವುದಾಗಿ ಎಸ್ಪಿ ಹೇಳಿದ್ದಾರೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಇದನ್ನು ಖಂಡಿಸಿದ್ದಾರೆ. ತನಿಖೆ ಮಾಡಬೇಕು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ ಇದಕ್ಕೆ ನಾವು ಬದ್ಧವಾಗಿದ್ದೇವೆ ಎಂದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಸೋಲಿಗೆ ನಳಿನ್ ಕುಮಾರ್ ಕಟೀಲ್ ಹಾಗೂ ಸದಾನಂದಗೌಡ ಅವರೇ ಕಾರಣ ಎಂದು ಆರೋಪಿಸಿ ಪುತ್ತೂರು ಕ್ಷೇತ್ರದಲ್ಲಿ ನೊಂದ ಹಿಂದೂ ಕಾರ್ಯಕರ್ತರು ನಾಯಕರ ಬ್ಯಾನರ್ಗೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರಹಾಕಿದ್ದರು. ಪ್ರಕರಣ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿ ಅಮಾನುಶವಾಗಿ ಹಲ್ಲೆ ನಡೆಸಿದ್ದಾರೆ. ಬಂಧನದ ವಿಚಾರ ತಿಳಿದ ಅರುಣ್ ಕುಮಾರ್ ಪುತ್ತಿಲ ಅವರು ಬಿಡಿಸಿ ಕೊಂಡೋಗಿದ್ದರು. ಇದಾದ ಬಳಿಕ ಹಲ್ಲೆಗೊಳಗಾದ ಕಾರ್ಯಕರ್ತರ ಗಾಯದ ಫೋಟೋಗಳು ವೈರಲ್ ಆಗಿದ್ದವು.

ಹೊಸದಾಗಿ ಆಯ್ಕೆಯಾಗಿರುವ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಅಭಿನಂದನೆ ಶುಭಾಶಯ ತಿಳಿಸಿದ ಕೋಟ ಶ್ರೀನಿವಾಸ್ ಪೂಜಾರಿ, ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ರಾಜ್ಯದಲ್ಲಿ ನಡೆದಿರುವ ವಿದ್ಯಾಮಾನಗಳು ಆತಂಕ ಹುಟ್ಟಿಸುತ್ತಿವೆ. ಭಟ್ಕಳ ಶಿರಸಿಯಲ್ಲಿ ಪಾಕಿಸ್ತಾನ ಮಾದರಿಯ ಧ್ವಜಗಳು ಹಾರಿಸಿ ಕೇಕೆ ಹಾಕಿದ್ದಾರೆ, ಬೆಳಗಾವಿಯ ಸಂಭ್ರಮೋತ್ಸವದಲ್ಲಿ ಪಾಕಿಸ್ತಾನ ಪರ ಘೋಷಣೆ ಮೊಳಗಿವೆ. ಶಿವಮೊಗ್ಗದಲ್ಲಿ ಬಿಜೆಪಿ ಮತದಾರರು, ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿವೆ. ಇಡೀ ರಾಜ್ಯದಲ್ಲಿ ಇಂತಹ ವಿದ್ಯಮಾನಗಳು ಖಂಡನೀಯ ಎಂದರು.

ರಾಷ್ಟ್ರ ವಿರೋಧಿ ಕೃತ್ಯ ಮಾಡುವವರಿಗೆ ಸಿಗುವ ಪ್ರೋತ್ಸಾಹ ಆತಂಕಕಾರಿಯಾಗಿದೆ. ವಿಪಕ್ಷ ಸ್ಥಾನದಲ್ಲಿ ನಿಂತು ಬಿಜೆಪಿ ಇದನ್ನು ಗಂಭೀರವಾಗಿ ನೋಡುತ್ತಿದೆ, ಕರ್ನಾಟಕವನ್ನು ಪಶ್ಚಿಮ ಬಂಗಾಳ, ಕೇರಳ ಮಾಡಿದರೆ ನಾವು ಸಹಿಸಲ್ಲ. ಬಿಜೆಪಿ ಇದಕ್ಕೆ ಪ್ರತಿರೋಧ ಮಾಡುವ ಜನಪರ ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಜಾರಿಗೆ ತರಬೇಕು ರಾಷ್ಟ್ರ ವಿರೋಧಿಗಳ ವಿರುದ್ಧ ಕ್ರಮ ಆಗಬೇಕು. ಹೊಸ ಮುಖ್ಯಮಂತ್ರಿ ಕಾಂಗ್ರೆಸ್ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Scroll to Top