ಉಡುಪಿ: ವ್ಯಕ್ತಿಯೋರ್ವರನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣ; ಆರೋಪಿಗಳಿಗೆ ಷರತ್ತು ಬದ್ಧ ಜಾಮೀನು

ಉಡುಪಿ ಮೇ 19: ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದ ವ್ಯಕ್ತಿಯನ್ನು ಅಪಹರಿಸಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳಿಗೆ ಉಡುಪಿ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.

ಪಾರೂಕ್ ನಿಟ್ಟೆ, ಶಾರೂಕ್, ಅನಿಲ್ ಪೂಜಾರಿ, ಇಕ್ಬಾಲ್ ಸಾಣೂರು ಪ್ರಕರಣದಲ್ಲಿ ಜಾಮೀನು ಪಡೆದ ಆರೋಪಿಗಳು.

ಪ್ರಕರಣಕ್ಕೆ ಸಂಬಂಧಿಸಿ ಈ ನಾಲ್ವರು ಆರೋಪಿತರು ನ್ಯಾಯಾಲಯಕ್ಕೆ ಹಾಜರಾಗಿ, ಜಾಮೀನಿನ ಮೇಲೆ ಬಿಡುಗಡೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಆರೋಪಿಗಳ ಪರ ವಿರೋಧ ವಾದವನ್ನು ಆಲಿಸಿದ ಪ್ರಧಾನ ನೀನಿಯರ್ ಸಿವಿಲ್ ಜಡ್ಜ್ ಮತ್ತು ಉಡುಪಿ ಯ ಸಿ.ಜೆ.ಎಮ್ ನ್ಯಾಯಾಲಯದ ನ್ಯಾಯಾಧೀಶೆ ಶಕುಂತಲಾ ಎಂ ಅವರು ಆರೋಪಿತರಿಗೆ ಷರತ್ತು ಬದ್ಧ ಜಾಮೀನನ್ನು ನೀಡಿ ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆ ವೇಳೆ ಆರೋಪಿತರೆಲ್ಲರ ಪರವಾಗಿ ಉಡುಪಿ ನ್ಯಾಯವಾದಿ ಆರೂರು ಸುಕೇಶ್‌ ಶೆಟ್ಟಿಯವರು ವಾದಿಸಿದ್ದರು.

ಮೇ 3 ರಂದು ಉಡುಪಿ ಫೋಕ್ಸೋ ನ್ಯಾಯಾಲಯಕ್ಕೆ ಸಾಕ್ಷಿ ಹೇಳಲು ಬಂದಿದ್ದ ಅಬ್ದುಲ್ ಜಬ್ಬಾರ್ ನಿಟ್ಟೆ ಅವರು ನ್ಯಾಯಾಲಯದಲ್ಲಿ ಸಾಕ್ಷಿ ನುಡಿದು ಆಟೋದಲ್ಲಿ ಹೋಗುತ್ತಿರುವಾಗ ಸಂಜೆ ವೇಳೆ ಗುಂಡಿಬೈಲುವಿನ ಬಾರ್‌ವೊಂದರ ಬಳಿ ಆರೋಪಿತರಾದ ಪಾರೂಕ್ ನಿಟ್ಟೆ, ಶಾರೂಕ್, ಅನಿಲ್ ಪೂಜಾರಿ, ಇಕ್ಬಾಲ್ ಸಾಣೂರು ಎಂಬ ನಾಲ್ವರು ಅಬ್ದುಲ್ ಜಬ್ಬಾರ್ ನಿಟ್ಟೆ ಅವರಿಗೆ ಹಲ್ಲೆ ಮಾಡಿ, ಬಲತ್ಕಾರವಾಗಿ ಕಾರಿನಲ್ಲಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಮರಕ್ಕೆ ಕಟ್ಟಿ ಹಾಕಿ ಅಲ್ಲೂ ಹಲ್ಲೆ ಮಾಡಿದ್ದರು. ಬಳಿಕ ಮರುದಿನ ಪಂಚಿಮಾರು ಬಳಿ ಪೊದೆಯೊಳಗೆ ದೂಡಿ ಹಾಕಿ ಹೋಗಿರುವುದಾಗಿ ಉಡುಪಿ ನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿತರ ಮೇಲೆ ಅಕ್ರಮವಾಗಿ ಬಂಧನದಲ್ಲಿಡುವ ಉದ್ದೇಶದಿಂದ ಅಪಹರಿಸಿ ಹಲ್ಲೆ ಮಾಡಿದ ಪ್ರಕರಣವನ್ನು ದಾಖಲಿಸಿದ್ದರು.

Scroll to Top