ಸರ್ಕಾರ ಬದಲಾಗ್ತಿದ್ದಂತೆ ಕರಾವಳಿಯಲ್ಲಿ ಬ್ಯಾನರ್ ರಾಜಕೀಯ; ಕಾಂಗ್ರೆಸ್‌ಗೆ ಕಲ್ಲಡ್ಕ ಪ್ರಭಾಕರ್ ಎಚ್ಚರಿಕೆ

ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ಹಾಗೂ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿರೋ ಆರೋಪ ರಾಜಕೀಯ ತಿರುವು ಪಡೆದಿದೆ.

ಕೈ ಕಾಲು ಬೆನ್ನು ತೊಡೆಗಳ ಮೇಲೆ ಬಾಸುಂಡೆ ಬರೋ ರೀತಿಯಲ್ಲಿ ಹೊಡೆಸಿಕೊಂಡ ಪುತ್ತೂರು ಹಿಂದೂ ಸಂಘಟನೆಯ ಕಾರ್ಯಕರ್ತರು ಆಸ್ಪತ್ರೆ ಸೇರಿದ್ದಾರೆ. ಬ್ಯಾನರ್ ವಿಚಾರಕ್ಕೆ ಈ ಮಟ್ಟಕ್ಕೆ ಹಲ್ಲೆ ನಡೆಸಿದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.





ಪುತ್ತೂರು ವಿಧಾನಸಭಾ ಕ್ಷೇತ್ರ ಬಿಜೆಪಿಯ ಭದ್ರಕೋಟೆ. ಆದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಹಿಂದೊಮ್ಮೆ ಭಾರೀ ಅಂತರದಿಂದ ಜಯಭೇರಿ ಬಾರಿಸ್ತಿದ್ದ ಬಿಜೆಪಿ ಈ ಬಾರಿ 3ನೇ ಸ್ಥಾನಕ್ಕೆ ಕುಸಿದಿದೆ. ಈ ಸೋಲಿನ ಬಳಿಕ ಆಕ್ರೋಶಿತರಾದ ಬಿಜೆಪಿ – ಹಿಂದೂ ಸಂಘಟನೆ ನಡುವೆ ಕಿಡಿ ಹೊತ್ತಿಸಿದೆ. ಒಂದು ಕಡೆ ಇದು ಹೊಸ ಸರ್ಕಾರದತ್ತ ಬೊಟ್ಟು ಮಾಡಿದ್ರೆ, ಮತ್ತೊಂದೆಡೆ ಬಿಜೆಪಿ ನಾಯಕರನ್ನೇ ಟಾರ್ಗೆಟ್ ಮಾಡಿದೆ.

ಈ ಆಕ್ರೋಶ ಬಿಜೆಪಿ ರಾಜ್ಯಾಧ್ಯಕ್ಷ ಕಟೀಲ್ ಹಾಗೂ ಬಿಜೆಪಿ ಸಂಸದ‌ ಸದಾನಂದಗೌಡರ ವಿರುದ್ಧ ತಿರುಗಿತ್ತು. ಪುತ್ತೂರು ಬಸ್ ನಿಲ್ದಾಣದ ಬಳಿ ಇಬ್ಬರ ಭಾವಚಿತ್ರದ ಬ್ಯಾನರ್ ಹಾಕಿ ಚಪ್ಪಲಿ ಹಾರ ಹಾಕಿದ್ದರು. ಇಬ್ಬರಿಗೂ ಶ್ರದ್ಧಾಂಜಲಿ ಎಂದು ಬ್ಯಾನರ್ ಬರೆಯಲಾಗಿತ್ತು.

ಈ ಘಟನೆಗೆ‌ ಸಂಬಂಧಿಸಿ ಪೊಲೀಸರಿಗೆ ಪುತ್ತೂರು ನಗರಸಭೆ ದೂರು ನೀಡಿತ್ತು. ತನಿಖೆ ಆರಂಭಿಸಿದ ಪೊಲೀಸರು ಒಂದಷ್ಟು ಯುವಕರನ್ನ ಹಿಡಿದು ಥರ್ಡ್ ಡಿಗ್ರಿ ಟ್ರೀಟ್ಮೆಂಟ್ ನೀಡಿದ್ದಾರೆ. ಅದರ ಪ್ರತಿಫಲವೇ ಹೀಗೆ ಆಸ್ಪತ್ರೆ ಬೆಡ್ ಸೇರಿದ್ದಾರೆ. ಘಟನೆ ಬಗ್ಗೆ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಿಡಿಕಾರಿದ್ದಾರೆ.

ಸರ್ಕಾರ ಬದಲಾದ ಕೂಡಲೇ ಹಿಂದೂ ಸಮಾಜದ ಮೇಲೆ ಆಕ್ರಮಣ ಮಾಡುವ ಪ್ರವೃತ್ತಿ ನಡೆಯಬಾರದು. ಸಾಮಾನ್ಯ ಕಾರ್ಯಕರ್ತನ ಮೇಲೆ ಪೊಲೀಸರು ಹೀಗೆ ಮಾಡಬಾರದು. ಸರ್ಕಾರ ಹೇಳಿದೆ ಅಂತಾ ಪೊಲೀಸರು ಹೀಗೆ ಮಾಡಿದ್ರೆ ನಾವು ಸುಮ್ನೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಆಗಬಹುದು.

ಬ್ಯಾನರ್ ಹಾಕಿದ್ದಕ್ಕೆ ಈ ರೀತಿಯಲ್ಲಿ ಪೊಲೀಸರು ಹಲ್ಲೆ ನಡೆಸಬೇಕಾದ ಅವಶ್ಯಕತೆ ಇರಲಿಲ್ಲ ಎಂದಿದ್ದಾರೆ.

ಘಟನೆ ಬಳಿಕ ಪುತ್ತೂರು ಠಾಣೆಗೆ ಆಗಮಿಸಿದ ಎಸ್.ಪಿ ವಿಕ್ರಮ್ ಅಮಾಟೆ ಸದ್ಯ ಎಸ್ಐ ಶ್ರೀನಾಥ್ ರೆಡ್ಡಿ ಹಾಗೂ ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡಿತಾ ಇರೋ ಸಂಘಟನೆ ಕಾರ್ಯಕರ್ತರನ್ನು ಚಕ್ರವರ್ತಿ ಸೂಲಿಬೆಲೆ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ‌. ಈ ಹಲ್ಲೆ ಪ್ರಕರಣ ಮುಂಬರುವ ದಿನಗಳಲ್ಲಿ ಮತ್ತಷ್ಟು ತಿರುವು ಪಡೆದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ.

Scroll to Top