ಸಿಬ್ಬಂದಿ ಕರ್ತವ್ಯ ನಿಷ್ಠೆಗೆ ಉಡುಪಿ ಜಿಲ್ಲಾಧಿಕಾರಿ ಸಲಾಂ

ಉಡುಪಿ: ಜಿಲ್ಲಾಡಳಿತದ ಸಿಬಂದಿ ತಮ್ಮ ವೈಯಕ್ತಿಕ ಕೆಲಸ ಕಾರ್ಯಗಳನ್ನು ಬದಿಗಿರಿಸಿ ದಿನದ 24 ಗಂಟೆಗಳ ಕಾಲ ಚುನಾವಣೆ ಕರ್ತವ್ಯ ನಡೆಸಿರುವುದು ಒಂದು ಉತ್ತಮ ಸಾಧನೆಯಾಗಿದೆ ಎನ್ನುವುದು ಜಿಲ್ಲಾ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಜಿಲ್ಲಾಧಿಕಾರಿ ಕೂರ್ಮಾ ರಾವ್‌ ಅವರ ಅನಿಸಿಕೆ. ಮುಖ್ಯವಾಗಿ ಸ್ವೀಪ್‌ ತಂಡದ ಕಾರ್ಯವೈಖರಿಯನ್ನು ಚುನಾವಣ ಆಯೋಗ ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದೆ. ಚುನಾವಣೆ ಜತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿತ್ತು. ಕಯಾಕಿಂಗ್‌ ಮೂಲಕ ಮತದಾನ ಜಾಗೃತಿ ಮಾಡಲಾಗಿತ್ತು.

ಮನೆಮನೆಗೆ ಭೇಟಿ ನೀಡಿ 80 ವರ್ಷ ಮೇಲ್ಪಟ್ಟವರು, ಅಂಗವಿಕಲರು ಮತದಾನ ಮಾಡುವಂತೆ ಪ್ರೇರೇಪಿ ಸುವುದು, ಯುವ ಮತದಾರರು ಅತೀ ಹೆಚ್ಚಿನ ಸಂಖ್ಯೆ ಯಲ್ಲಿ ನೋಂದಣಿ ಮಾಡುವಂತಾಗಲು ಕಾಲೇಜುಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿರುವುದು ಸಹಿತ ಹಲವಾರು ಕಾರ್ಯಕ್ರಮಗಳನ್ನು ಮಾಡಲಾಗಿತ್ತು. 7,000ಕ್ಕೂ ಅಧಿಕ ಸಿಬ್ಬಂದಿ ಕರ್ತವ್ಯ ನಿರ್ವಹಿಸಿದ್ದರು ಎಂದರು.

ಜಿಲ್ಲಾ ಚುನಾವಣಾಧಿಕಾರಿಯಾಗಿ ಈ ಹಿಂದೆ ಯಾದಗಿರಿಯಲ್ಲಿಯೂ ಕರ್ತವ್ಯ ನಿರ್ವಹಿಸಿದ್ದೇನೆ. ಲೋಕಸಭಾ ಚುನಾವಣೆಯಲ್ಲಿಯೂ ಕೆಲಸ ನಿರ್ವಹಿಸಿದ ಅನುಭವವಿದೆ ಎಂದರು. ಈ ಬಾರಿ ತರಬೇತಿಗೆ ವಿಶೇಷ ಆದ್ಯತೆ ನೀಡಿದ್ದೇವೆ. ಕರ್ತವ್ಯ ನಿರತ ಎಲ್ಲ ಸಿಬಂದಿಯೂ ಹಲವು ಸುತ್ತಿನ ತರಬೇತಿ ನೀಡಲಾಗಿತ್ತು. ನಿಯಮಾವಳಿ ಉಲ್ಲಂಘನೆ ಆಗದಂತೆ ರಾಜಕೀಯ ಪಕ್ಷಗಳ ಪ್ರಮುಖರಿಗೂ ಚುನಾವಣ ಆಯೋಗದ ನಿರ್ದೇಶನಗಳನ್ನು ತಿಳಿಸಿ ಕಟ್ಟುನಿಟ್ಟಾಗಿ ಪಾಲಿಸಲು ಸೂಚನೆ ನೀಡಲಾಗಿತ್ತು. ಇದಕ್ಕೆ ಎಲ್ಲರೂ ಸಹಕರಿಸುವ ಜತೆಗೆ ನಮ್ಮ ಚುನಾವಣೆ ಎಂಬ ಹಬ್ಬದಲ್ಲಿ ಎಲ್ಲರೂ ಪಾಲ್ಗೊಂಡಿದ್ದಾರೆ ಎಂದರು.

Scroll to Top