ಮಂಗಳೂರು, ಮೇ.19: ಪುತ್ತೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಗೆ ಕಲ್ಲಡ್ಕ ಪ್ರಭಾಕರ್ ಭಟ್ ಹಾಗೂ ನಳಿನ್ ಕುಮಾರ್ ಕಟೀಲ್ ಅವರೇ ಕಾರಣ ಎಂದು ಮಾಜಿ ಸಚಿವ ಅಭಯ್ ಚಂದ್ರ ಜೈನ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಘಟನೆಗೆ ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ ಕಟೀಲ್ ಕಾರಣ. ಸಿದ್ದರಾಮಯ್ಯ ನಾಳೆ ಅಧಿಕಾರ ಸ್ವೀಕಾರ ಮಾಡಬೇಕು. ಕಲ್ಲಡ್ಕ ಭಟ್ ಈ ಘಟನೆಗೆ ಕಾಂಗ್ರೆಸ್ ಕಾರಣ ಅಂತಾ ಹೇಳುತ್ತಾರೆ. ಕಟೀಲ್ ಲೋಕಸಭಾ ಸದಸ್ಯನಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡಿಸ್ತಾರೆ ಅಂದ್ರೆ ಅವರಿಗೆ ಮಾನವೀಯತೆ ಇದ್ಯಾ ಎಂದು ಜೈನ್ ಪ್ರಶ್ನಿಸಿದರು.
ಇದೇ ವೇಳೆ ಬಿ.ಕೆ ಹರಿಪ್ರಸಾದ್ ರನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ನಲ್ಲಿ ನಾಯಕತ್ವದ ಕೊರತೆ ಇದೆ. ಮೊಯ್ಲಿ, ಆಸ್ಕರ್, ಪೂಜಾರಿಯವರಂತಹ ನಾಯಕ ನಮಗೆ ಬೇಕು. ಈ ಜಿಲ್ಲೆಗೆ ಬಲಿಷ್ಠ ನಾಯಕ ಬೇಕು. ಇದನ್ನು ಹೈಕಮಾಂಡ್, ಕಾಂಗ್ರೆಸ್ ಪ್ರಮುಖರು ಇದನ್ನು ಅರಿಯಬೇಕು. ಹೀಗಾಗಿ ಬಿ.ಕೆ ಹರಿಪ್ರಸಾದ್ ಅವರನ್ನು ಗೃಹ ಸಚಿವರನ್ನಾಗಿ ಮಾಡಬೇಕು. ಹಾಗೆಯೇ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿಯೂ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಹರಿಪ್ರಸಾದ್ ಶಕ್ತಿವಂತ, ಆಡಳಿತದಲ್ಲಿ ತಿಳುವಳಿಕೆಯುಳ್ಳ ವ್ಯಕ್ತಿಯಾಗಿದ್ದಾರೆ. ಹರಿಪ್ರಸಾದ್ ಉಸ್ತುವಾರಿ ಮಂತ್ರಿ ಆದರೆ ಜಿಲ್ಲೆಯ ಅಭಿವೃದ್ಧಿಯಾಗುತ್ತದೆ. ಅವರು ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರದ ಜನರನ್ನು ಸಮಾನಾಗಿ ಕಾಣುತ್ತಾರೆ. ಹರಿಪ್ರಸಾದ್ ಅವರು ಗಡುಸಾಗಿ ಆಡಳಿತ ನಡೆಸುವ ವ್ಯಕ್ತಿಯಾಗಿದ್ದಾರೆ. ಅವರು ಛಲದಂಕ ಮಲ್ಲ,1978 ರಿಂದ ರಾಜಕೀಯದಲ್ಲಿ ಸಕ್ರಿಯವಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಕೊಟ್ಟರೆ ಜನ ಸಾಮರಸ್ಯದ ಜೀವನ ಮಾಡಬಹುದು. ಜಿಲ್ಲೆಗೆ ಶಕ್ತಿ ತುಂಬುವ ಕೆಲಸವನ್ನು ಬಿ.ಕೆ ಹರಿಪ್ರಸಾದ್ ಮಾಡಲಿದ್ದಾರೆ. ಯುಟಿ ಖಾದರ್ (UT Khader) ಗೂ ಒಳ್ಳೆಯ ಮಂತ್ರಿ ಸ್ಥಾನ ಸಿಗಬೇಕು ಎಂದರು.
ಹರಿಪ್ರಸಾದ್ ಗೆ ಉಸ್ತುವಾರಿ ಸ್ಥಾನ, ಖಾದರ್ ಗೆ ಮಂತ್ರಿ ಸ್ಥಾನ ಕೊಡಬೇಕು. ಕಾಂಗ್ರೆಸ್ ನ ಐದು ಗ್ಯಾರಂಟಿ ಜಿಲ್ಲೆಯಲ್ಲಿ ಯಶಸ್ವಿಯಾಗಿಲ್ಲ. ಆದರೆ ಈ ಜಿಲ್ಲೆಗೂ ಆ ಯೋಜನೆಯನ್ನು ಜಾರಿ ಮಾಡಬೇಕು. ಯುಟಿ ಖಾದರ್ ಸೌಮ್ಯ ಸ್ವಭಾವದ ವ್ಯಕ್ತಿಯಾಗಿದ್ದಾರೆ. ಯುಟಿ ಖಾದರ್ ರಲ್ಲಿ ಡ್ಯಾಶಿಂಗ್ ನೇಚರ್ ಇಲ್ಲ. ಖಾದರ್ ಮೇಲೆ ಕೋಮು ಭಾವನೆ ತೋರಿಸಿ ಅವರನ್ನು ಸ್ತಬ್ಧ ಮಾಡುತ್ತಾರೆ ಎಂದು ಹೇಳಿದರು.