ಸಿದ್ದು-ಡಿಕೆಶಿ ಸಂಪುಟಕ್ಕೆ ಅಷ್ಟ ಬಲ: 8 ಮಂದಿ ಶಾಸಕರು ಇಂದು ಸಚಿವರಾಗಿ ಪ್ರಮಾಣ ವಚನ

ಬೆಂಗಳೂರು: ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಆಯ್ಕೆ ಕಗ್ಗಂಟು ಬಗೆಹರಿದು ಸರ್ಕಾರ ರಚನೆ ಪ್ರಕ್ರಿಯೆ ಆರಂಭವಾಗಿದ್ದು, ಇಂದು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಜತೆಗೆ ಎಂಟು ಮಂದಿ ಸಚಿವರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಸಚಿವರಾಗಿ ಡಾ.ಜಿ ಪರಮೇಶ್ವರ್, ಎಂ.ಬಿ ಪಾಟೀಲ್, ಕೆ.ಜೆ ಜಾರ್ಜ್, ಕೆ.ಎಚ್ ಮುನಿಯಪ್ಪ, ರಾಮಲಿಂಗಾರೆಡ್ಡಿ, ಸತೀಶ್ ಜಾರಕಿಹೊಳಿ, ಪ್ರಿಯಾಂಕಾ ಖರ್ಗೆ, ಜಮೀರ್ ಅಹ್ಮದ್ ಖಾನ್ ಅವರು ಇಂದು ಮಧ್ಯಾಹ್ನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ವಿಶೇಷವೆಂದರೆ ಇಂದು ಸಚಿವರಾಗಲಿರುವ ಎಂಟೂ ಮಂದಿಯು ಮಾಜಿ ಸಚಿವರು. (ಮುನಿಯಪ್ಪ ಕೇಂದ್ರ ಸಚಿವರಾಗಿದ್ದರು). ಇಂದು ಸಂಜೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮತ್ತೆ ದೆಹಲಿಗೆ ತೆರಳಲಿದ್ದು, ಮತ್ತಷ್ಟು ಸಚಿವರನ್ನು ಸೇರಿಸುವ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ ನಡೆಸಲಿದ್ದಾರೆ.

ಮಧ್ಯಾಹ್ನ 12.30ಕ್ಕೆ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಡಿಸಿಎಂ ಆಗಿ ಡಿ.ಕೆ. ಶಿವಕುಮಾರ್‌ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದು, ರಾಜ್ಯಪಾಲ ಥಾವರ್ ಚಾಂದ್ ಗೆಹ್ಲೋಟ್ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಇದನ್ನು ಕಾಂಗ್ರೆಸ್‌ ಕರ್ನಾಟಕದಲ್ಲಿ ತನ್ನ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿಸಿ ಕಹಳೆ ಮೊಳಗಿಸಲು ಸಿದ್ಧತೆ ನಡೆಸಿದ್ದು, ಲಕ್ಷಾಂತರ ಜನರು ಸೇರುವ ನಿರೀಕ್ಷೆ ಇದೆ.

ಶನಿವಾರ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ವಾದ್ರಾ, ರಾಹುಲ್‌ ಗಾಂಧಿ ಸಾಕ್ಷಿಯಾಗಲಿದ್ದಾರೆ. ಇವರಲ್ಲದೆ ವಿವಿಧ ರಾಜ್ಯಗಳ ಸಿಎಂಗಳಾದ ಎಂ.ಕೆ. ಸ್ಟಾಲಿನ್‌, ನಿತೀಶ್‌ ಕುಮಾರ್‌, ಹೇಮಂತ್‌ ಸೊರೇನ್‌, ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌; ಉದ್ಧವ್‌ ಠಾಕ್ರೆ, ಅಖೀಲೇಶ್‌ ಯಾದವ್‌, ಫಾರೂಕ್‌ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಸೀತಾರಾಂ ಯೆಚೂರಿ, ಡಿ. ರಾಜಾ ಮತ್ತಿತರರು ಆಗಮಿಸಲಿದ್ದಾರೆ. ಮುಂದಿನ ವರ್ಷ ಲೋಕಸಭೆ ಚುನಾವಣೆ ನಡೆಯಲಿದ್ದು, ವಿಪಕ್ಷಗಳ ಶಕ್ತಿ ಪ್ರದರ್ಶನಕ್ಕೂ ಈ ಕಾರ್ಯಕ್ರಮ ವೇದಿಕೆಯಾಗಲಿದೆ.

Scroll to Top