ನವದೆಹಲಿ, ಮೇ22: ಚಲಾವಣೆಯಿಂದ 2,000 ರೂ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಆದೇಶದ ನಂತರ ಆರ್‌ಬಿಐ 1,000 ರೂ ನೋಟುಗಳನ್ನು ಮರು ಪರಿಚಯಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, 1,000 ರೂ ನೋಟುಗಳನ್ನು ಮತ್ತೆ ಜಾರಿಗೊಳಿಸುವ ಯೋಜನೆಯನ್ನು ಹೊಂದಿಲ್ಲ ಎಂದರು.
ನವೆಂಬರ್ 2016 ರಲ್ಲಿ 500 ಮತ್ತು 1,000 ರೂಪಾಯಿ ನೋಟುಗಳನ್ನು ನಿಷೇಧಿಸಿದಾಗ ಮೋದಿ ಸರ್ಕಾರದ ಡಿಮಾನಿಟೈಸೇಶನ್ ಕ್ರಮದ ನಂತರ 2,000 ರೂಪಾಯಿ ಕರೆನ್ಸಿ ನೋಟುಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಯಿತು. ರಾತ್ರೋರಾತ್ರಿ 10 ಲಕ್ಷ ಕೋಟಿ ರೂ. ಮೌಲ್ಯದ ನೋಟುಗಳನ್ನು ಅಮಾನತು ಮಾಡಿದರು. ಆದರೆ ಆಗಿನ ಪರಿಸ್ಥಿತಿಯಲ್ಲಿ 2,000 ರೂ. ನೋಟನ್ನು ಬಿಡುಗಡೆ ಮಾಡುವ ಅನಿವಾರ್ಯತೆ ಕೂಡ ಇತ್ತು. ನೋಟುಗಳ ಹಿಂತೆಗೆತದ ಬಳಿಕ ಆ ಹಣದ ಮೌಲ್ಯವನ್ನು ತಕ್ಷಣ ವ್ಯವಸ್ಥೆಗೆ ಸೇರಿಸುವ ಉದ್ದೇಶಕ್ಕಾಗಿ 2,000 ರೂ. ನೋಟನ್ನು ಬಿಡುಗಡೆ ಮಾಡಲಾಯಿತು ಎಂದರು.
ಇನ್ನೂ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಅವರು ಚಲಾವಣೆಯಿಂದ ಹಿಂತೆಗೆದುಕೊಂಡಿರುವ 2,000 ರೂ. ನೋಟುಗಳನ್ನು ಜನ ಬ್ಯಾಂಕ್‌ಗೆ ಹೋಗಿ ಬದಲಾಯಿಸಿಕೊಳ್ಳಲು ಅವಸರ ಮಾಡಬೇಕಿಲ್ಲ. ವಿನಿಮಯಕ್ಕಾಗಿ ಜನರು ಬ್ಯಾಂಕ್‌ಗಳಿಗೆ ಧಾವಿಸಬಾರದು ಎಂದು ಒತ್ತಾಯಿಸಿದರು.