ಬೆಂಗಳೂರು: ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ಕೋಟಿ ರೂ. ಬೆಳೆಬಾಳುವ ರೇಂಜ್ ರೋವರ್ ಕಾರಿಗೆ ಬೆಂಕಿ ಹಚ್ಚಿ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಡಾನ್ ದಿ.ಮುತ್ತಪ್ಪ ರೈ ಪುತ್ರ ಸೇರಿದಂತೆ 9 ಜನರ ವಿರುದ್ಧ ಸದಾಶಿವನಗರ ಪೊಲೀಸರು 188 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
2021ರ ಅಕ್ಟೋಬರ್‌ನಲ್ಲಿ ಸದಾಶಿವನಗರದ ಸಪ್ತಗಿರಿ ಅಪಾರ್ಟ್ಮೆಂಟ್‌ನಲ್ಲಿ ಉದ್ಯಮಿ ಶ್ರೀನಿವಾಸ್ ನಾಯ್ಡು ಅವರ ರೇಂಜ್ ರೋವರ್ ಕಾರನ್ನು ಆರೋಪಿಗಳು ಸುಟ್ಟುಹಾಕಿದ್ದರು. ಈ ಕುರಿತು ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಒಟ್ಟು 10 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ರಿಕ್ಕಿ ರೈ ಸೂಚನೆಯಂತೆ ಕಾರು ಸುಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಘಟನೆ ಕುರಿತು ತನಿಖೆ ನಡೆಸಿದ ಸದಾಶಿವನಗರ ಪೊಲೀಸರು 33ನೇ ಎಸಿಎಂಎಂ ಕೋರ್ಟ್‌ಗೆ 188 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.
ದಿವಗಂತ ಮಾಜಿ ಡಾನ್ ಮುತ್ತಪ್ಪ ರೈ ಅವರ ಮಗ ರಿಕ್ಕಿ ರೈ ಮತ್ತು ಉದ್ಯಮಿ ಶ್ರೀನಿವಾಸ್ ನಾಯ್ಡು ಒಂದು ಕಾಲದಲ್ಲಿ ಆತ್ಮೀಯ ಗೆಳೆಯರಾಗಿದ್ದರು. ಮುತ್ತಪ್ಪ ರೈ ಅವರ ನಿಧನದ ಬಳಿಕ ಶ್ರೀನಿವಾಸ್ ನಾಯ್ಡು ರೈ ಗ್ರೂಪಿನಿಂದ ಹೊರಬಂದಿದ್ದರು. ನಾಯ್ಡು ಹೊರ ಬಂದಿದಕ್ಕೆ ರಿಕ್ಕಿ ರೈ ದ್ವೇಷ ಸಾಧಿಸಿ ಈ ಕೃತ್ಯ ಎಸಗಿದ್ದಾರಾ ಎಂಬ ಶಂಕೆ ಈಗ ವ್ಯಕ್ತವಾಗಿದೆ.
ಚಾರ್ಜ್‌ಶೀಟ್‌ನಲ್ಲಿ ಏನಿದೆ..!!?
ಈ ಘಟನೆ ನಡೆಯುವ 3 ತಿಂಗಳಿಗೂ ಮೊದಲು ರಿಕ್ಕಿ ರೈ ಶ್ರೀನಿವಾಸ್ ನಾಯ್ಡು ಅವರ ಕಾರನ್ನು ನೋಡಿ ನೈಸ್ ಕಾರ್ ಡ್ಯೂಡ್ ಎಂದು ಅದನ್ನು ಬೂದಿ ಮಾಡುವ ಸವಾಲು ಹಾಕಿದ್ದಾರೆ. ಈ ಕಾರಲ್ಲಿ ಓಡಾಡಿಕೊಂಡು ನನ್ನ ಮುಂದೆ ಎಷ್ಟು ದಿನ ಮೆರೆಯುತ್ತೀಯಾ ಮೆರಿ. ಎಷ್ಟು ದಿನ ಈ ಕಾರಲ್ಲಿ ಓಡಾಡುತ್ತೀಯಾ ನೋಡುತ್ತೇನೆ. ಈ ಕಾರನ್ನು ಬೂದಿ ಮಾಡುತ್ತೇನೆ ಎಂದು ರಿಕ್ಕಿ ರೈ ನಾಯ್ಡು ಅವರಿಗೆ ವಾರ್ನಿಂಗ್ ಕೊಟ್ಟಿದ್ದ ಅಂಶಗಳಿವೆ. ಇದನ್ನೂ ಓದಿ: ಮುಖ್ಯಮಂತ್ರಿ ಆಯ್ಕೆಗಿಂತಲೂ ಕಗ್ಗಂಟಾದ ವಿಪಕ್ಷ ನಾಯಕನ ಆಯ್ಕೆ
ರಿಕ್ಕಿ ವಾರ್ನಿಂಗ್‌ಗೆ ಶ್ರೀನಿವಾಸ್ ನಾಯ್ಡು ತಲೆಕೆಡಿಸಿಕೊಳ್ಳದೇ ಸುಮ್ಮನಾಗಿದ್ದರು. ಇದಾದ ನಂತರ ನಾರಾಯಣಸ್ವಾಮಿ ಎಂಬವರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ನಡೆದಿತ್ತು. ಆರೋಪಿಗಳ ಹೇಳಿಕೆ ಪ್ರಕಾರ ಆರೋಪಿ ನಾರಾಯಣ ಸ್ವಾಮಿ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದು, ಮೊದಲಿಗೆ ಶ್ರೀನಿವಾಸ್ ನಾಯ್ಡು ಅವರ ಸ್ನೇಹಿತ ಸುಪ್ರೀತ್‌ಗೂ ಹಲ್ಲೆ ನಡೆಸಿದ್ದಾರೆ. ಬಳಿಕ ಶ್ರೀನಿವಾಸ್ ನಾಯ್ಡು ಅವರ ಫ್ಲ್ಯಾಟ್‌ಗೂ ನುಗ್ಗಿ ಹಲ್ಲೆ ನಡೆಸುವ ಯತ್ನ ವಿಫಲವಾದ್ದರಿಂದ ಕಾರಿಗೆ ಬೆಂಕಿ ಹಚ್ಚುವ ಪ್ಲಾನ್ ಮಾಡಿದ್ದಾರೆ.
ಮಧ್ಯರಾತ್ರಿ ಬುಲೆಟ್ ಮತ್ತು ಕಾರಿನಿಂದ ಎರಡು ಲೀಟರ್‌ನ ಎರಡು ಬಾಟಲ್‌ನಲ್ಲಿ ಪೆಟ್ರೋಲ್ ಎಳೆದು ಕಾರಿಗೆ ಸುರಿದಿದ್ದಾರೆ. ಬಳಿಕ ಲೈಟರ್‌ನಿಂದ ಬೆಂಕಿ ಹಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ನಾರಾಯಣಸ್ವಾಮಿ, ಅಭಿನಂದನ್, ಮುನಿಯಪ್ಪ, ಗಣೇಶ್, ಶಶಾಂಕ್, ನಿರ್ಮಲ್, ರೋಹಿತ್, ರಾಕೇಶ್ ಹಾಗೂ ರಿಕ್ಕಿ ರೈ ಮೇಲೆ ಸದಾಶಿವ ನಗರ ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಎ1 ಆರೋಪಿ ನಾರಾಯಣಸ್ವಾಮಿ ಹಾಗೂ ಎ8 ಆರೋಪಿ ರಿಕ್ಕಿ ರೈ ಹೇಳಿಕೆ ಇನ್ನೂ ಬಾಕಿ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.