ಬೆಂಗಳೂರು: 4 ವರ್ಷ ಬಿಜೆಪಿ ಅಧಿಕಾರದಲ್ಲಿದ್ದಾಗ ಏನು ಮಾಡಿದ್ರಿ ಗೊತ್ತಿದೆ, ಆ ತಪ್ಪು ಮರುಕಳಿಸಬಾರದು, ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾನೂನು ಸುವ್ಯವಸ್ಥೆ ಹದಗೆಡಬಾರದು, ತಾರತಮ್ಯ ಮಾಡಬಾರದು ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ಹಿನ್ನಲೆಯಲ್ಲಿ ಮುಖ್ಯಮಂತ್ರಿಯಾಗಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಉನ್ನತ ಮಟ್ಟದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ನೈತಿಕ ಪೊಲೀಸ್ ಗಿರಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಆಯಾ ವಿಭಾಗದ ಡಿಸಿಪಿ ಹಾಗೂ ಎಸ್ ಪಿ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಡಗ್ಸ್ ಮಾಫಿಯಾ, ರೌಡಿಸಂ ಚಟುವಟಿಕೆಗಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸಾಮರಸ್ಯವನ್ನು ಕದಡುವಂತಹ, ತೇಜೋವಧೆ ಮಾಡುವ, ಪ್ರಚೋದನಕಾರಿ ಪೋಸ್ಟ್ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು. ಯಾರಿಗೂ ತಾರತಮ್ಯ ಮಾಡದೇ ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ, ನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಮಂಗಳೂರಿನಲ್ಲಿ ಪೊಲೀಸರೇ ಕೇಸರಿ ಶಾಲು ಹಾಕುತ್ತೀರಿ ಅಂದರೆ ಹೇಗೆ..!?? ಈ ಸಭೆಗೂ ಕೇಸರಿ ಶಾಲು ಹಾಕಿಕೊಂಡ ಬರಬೇಕಾಗಿತ್ತು. ನಮ್ಮ ಸರ್ಕಾರದಲ್ಲಿ ಪೊಲೀಸ್ ಇಲಾಖೆಯನ್ನು ಕೇಸರೀಕರಣ ಮಾಡಲು ನಾವು ಬಿಡುವುದಿಲ್ಲ ಎಂದರು. ಪಿಎಸ್ಐ ಅಕ್ರಮದಲ್ಲಿ ಒಬ್ಬ ಎಡಿಜಿಪಿ ಪೇಪರ್ ತಿದ್ದುತ್ತಾರೆ ಅಂದರೆ ಇಲಾಖೆ ಎಷ್ಟು ಕೆಟ್ಟು ಹೋಗಿದೆ ಎಂಬುದು ತಿಳಿಯುತ್ತದೆ. ಪೊಲೀಸ್ ಇಲಾಖೆ ಘನತೆಯನ್ನು ನೀವು ಹಾಳು ಮಾಡಿದ್ದೀರಿ. ಇದನ್ನು ನಾವು ಸಹಿಸುವುದಿಲ್ಲ ಎಂದು ಡಿಕೆಶಿ ವಾರ್ನಿಂಗ್ ನೀಡಿದರು.