ಬೆಂಗಳೂರು, ಮೇ 24: ‘ರಾಜ್ಯದಲ್ಲಿ ಶಾಂತಿ ಭಂಗವಾದ್ರೆ ಭಜರಂಗದಳ ಮಾತ್ರವಲ್ಲ ಆರೆಸ್ಸೆಸ್ ನ್ನು ನಮ್ಮ ಸರ್ಕಾರ ನಿಷೇಧಿಸುತ್ತದೆ. ಒಂದು ವೇಳೆ ಬಿಜೆಪಿ ನಾಯಕರಿಗೆ ಇದನ್ನು ಒಪ್ಪಿಕೊಳ್ಳಲು ಅಸಾದ್ಯವಾದ್ರೆ ಪಾಕಿಸ್ತಾನಕ್ಕೆ ಹೋಗಬಹುದು’ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪೊಲೀಸರು ಕೇಸರಿ ಶಾಲು ಹಾಕಿದ್ದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ವಿಚಾರಕ್ಕೆ ಸಂಬಂಧಿಸಿ ಬೆಂಗಳೂರಿನಲ್ಲಿ ನೂತನ ಸಚಿವ ಪ್ರಿಯಾಂಕ್ ಖರ್ಗೆ ಸಮರ್ಥನೆ ಮಾಡಿಕೊಂಡು ಮಾತನಾಡಿ, ‘ರಾಜ್ಯವನ್ನುಸರ್ವ ಜನಾಂಗದ ಶಾಂತಿಯ ತೋಟ ಮಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಶಾಂತಿ ಭಂಗವಾದ್ರೆ ಬಜರಂಗದಳ ಅಥವಾ ಆರೆಸ್ಸೆಸ್ ಎಂಬುದನ್ನು ನಾವು ಪರಿಗಣಿಸುವುದಿಲ್ಲ.ಕಾನೂನನ್ನು ಕೈಗೆ ತೆಗೆದುಕೊಂಡರೆ ನಿಷೇಧ ಕಟ್ಟಿಟ್ಟ ಬುತ್ತಿ’ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ,
‘ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಯಂತೆ ಯಾವುದೇ ಸಂಘಟನೆಯನ್ನು ನಿಷೇಧಿಸಲು ಹಿಂದೆ ಮುಂದೆ ಯೋಚಿಸುವುದಿಲ್ಲ. ಅಲ್ಲದೇ ಹಿಜಾಬ್, ಹಲಾಲ್ ಕಟ್ ಮತ್ತು ಗೋಹತ್ಯೆ ಕಾನೂನುಗಳ ಮೇಲಿನ ನಿಷೇಧವನ್ನು ಸರ್ಕಾರ ಹಿಂಪಡೆಯಲಿದೆ. ಕೇಸರಿಕರಣ ತಪ್ಪು ಯಾಕೆಂದರೆ ಕಾಂಗ್ರೆಸ್ ಪಕ್ಷ ಎಲ್ಲರೂ ಅನುಸರಿಸಬಹುದಾದ ಬಸವಣ್ಣನವರ ತತ್ವ ಅನುಸರಿಸುತ್ತದೆ ಎಂದು ಹೇಳಿದ್ದಾರೆ.