ಮಂಗಳೂರು, ಮೇ.25: ಬಜರಂಗದಳ ಮತ್ತು ಬಿಜೆಪಿ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಆಸ್ಪತ್ರೆಗೆ ಶಿಫ್ಟ್ ಆಗಿರುವ ಗಾಯಾಳುವಿನ ಆರೋಗ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿಚಾರಿಸಿದ್ದಾರೆ.
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಾಣಿ ಎಂಬಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಮತ್ತು ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದರು. ಈ ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಹೇಂದ್ರರನ್ನು ಪುತ್ತೂರು ಆಸ್ಪತ್ರೆಯಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಮಂಗಳೂರಿಗೆ ಶಿಫ್ಟ್ ಆಗುತ್ತಿದ್ದಂತೆಯೇ ನಳಿನ್ ಕುಮಾರ್ ಕಟೀಲ್ ಅವರು ಗಾಯಾಳು ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ತೆರಳಿದ್ದಾರೆ. ಇನ್ನು ಸುದ್ದಿ ತಿಳಿದು ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿದ ರಾಜೇಶ್ ನಾಯ್ಕ್ ಕೂಡ ಕಟೀಲ್ ಗೆ ಸಾಥ್ ನೀಡಿದರು.
ಏನಿದು ಘಟನೆ..?
ಫಲಿತಾಂಶದ ದಿನದ ಸಂಭ್ರಮಾಚರಣೆ ವೇಳೆ ನಡೆದಿದ್ದ ಗಲಾಟೆಗೆ ಪ್ರತೀಕಾರ ಶಂಕೆ ವ್ಯಕ್ತವಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎನ್ನಲಾದ ತಂಡದಿಂದ ದಾಳಿ ನಡೆದಿರುವ ಮಾಹಿತಿ ಸಿಕ್ಕಿತ್ತು. ಪೆರಾಜೆ ಬಜರಂಗದಳ ಸಂಚಾಲಕ ಮಹೇಂದ್ರ ಹಾಗೂ ಬಿಜೆಪಿ ಕಾರ್ಯಕರ್ತ ಪ್ರಶಾಂತ್ ನಾಯ್ಕ್ ಮೇಲೆ ದಾಳಿಯಾಗಿತ್ತು. ಮಾಣಿ ಜಂಕ್ಷನ್ ನಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ವೇಳೆ ಓಮ್ನಿ ಕಾರಿನಲ್ಲಿ ಬಂದ ತಂಡ ಸ್ಕೂಟರ್ ಗೆ ಡಿಕ್ಕಿ ಹೊಡೆದು ಕೃತ್ಯ ಎಸಗಲಾಗಿತ್ತು. ಘಟನೆಯಿಂದ ಯುವಕರ ಕಾಲು ಮತ್ತು ತಲೆಯ ಭಾಗಕ್ಕೆ ಗಾಯಗಳಾಗಿವೆ.
ಮಂಗಳೂರು ನಿವಾಸಿ ರಾಕೇಶ್, ಮಾಣಿ ಮಂಜುನಾಥ್ ಯಾನೆ ಮಂಜು, ಪ್ರವೀಣ್ ನಾಯ್ಕ್ ಯಾನೆ ಮಹಾಲಿಂಗ ಮತ್ತಿತರ ತಂಡ ಹಲ್ಲೆ ನಡೆಸಿದ ಬಗ್ಗೆ ದೂರು ನೀಡಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರ ತಂಡ ಭೇಟಿ ನೀಡಿ ತನಿಖೆ ನಡೆಸಿದೆ. ಈ ಸಂಬಂಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.