ಉಡುಪಿ: ಪುತ್ತಿಗೆ ಮಠದ ಅಕ್ಕಿ ಮುಹೂರ್ತ ಸಂಪನ್ನ

ಉಡುಪಿ: ಶ್ರೀಕೃಷ್ಣ ಮಠದಲ್ಲಿ 2024ರ ಜ. 18ರಂದು ನಡೆಯುವ ಪುತ್ತಿಗೆ ಮಠದ ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ದ್ವಿತೀಯ ಮುಹೂರ್ತವಾದ ಅಕ್ಕಿ ಮಹೂರ್ತವು ಮಠದ ಆವರಣದಲ್ಲಿ ಗುರುವಾರ ನೆರವೇರಿತು.

ಪ್ರಾತಃಕಾಲ ದೇವತಾ ಪ್ರಾರ್ಥನೆ ನಡೆಸಿದ ಅನಂತರ ಶ್ರೀ ಅನಂತೇಶ್ವರ ದೇಗುಲ, ಶ್ರೀ ಚಂದ್ರಮೌಳೀಶ್ವರ ದೇಗುಲ, ಶ್ರೀಕೃಷ್ಣ ಮಠಕ್ಕೆ ವಾದ್ಯ ಗೋಷ್ಠಿ, ಬಿರುದಾವಳಿಗಳೊಂದಿಗೆ ತೆರಳಿ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಲಾ ಯಿ ತು. ರಥಬೀದಿ ಯಲ್ಲಿ ಚೆಂಡೆ, ವಾದ್ಯ ಸಹಿತ ಮಂತ್ರ ಘೋಷಗಳೊಂದಿಗೆ ಚಿನ್ನದ ಪಾಲಕಿ ಯಲ್ಲಿ ಶ್ರೀಮುಡಿ ಮೆರವಣಿಗೆ ನಡೆಯಿತು.

ಅನಂತರ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಠದ ಪಟ್ಟದ ದೇವರಾದ ಶ್ರೀ ವಿಟuಲ ದೇವರ ಮುಂಭಾಗದಲ್ಲಿ ಸ್ವರ್ಣ ಪಲ್ಲಕಿಯಲ್ಲಿ ತರಲಾದ ಶ್ರೀಮುಡಿಗೆ ವಿಶೇಷ ಪೂಜೆ ಸಲ್ಲಿಸಿದರು. ತಂಡುಲ ಸಂಗ್ರಹ, ಸಂಘ-ಸಂಸ್ಥೆಗಳಿಂದ ಅಕ್ಕಿ ಸಂಗ್ರಹ ಸಂಕಲ್ಪ ಮಾಡಲಾಯಿತು. ಆನೆಗುಡ್ಡೆ ಶ್ರೀ ಸಿದ್ಧಿವಿನಾಯಕ ದೇಗುಲದ ಸೂರ್ಯನಾರಾಯಣ ಉಪಾಧ್ಯಾಯರು ಶ್ರೀಪಾದರಿಗೆ ಪ್ರಸಾದ ನೀಡಿದರು.

ಅನ್ನದಾನ ಶ್ರೇಷ್ಠ ದಾನ
ಉಡುಪಿಯ ಶ್ರೀಕೃಷ್ಣ “ಅನ್ನಬ್ರಹ್ಮ’. ಬೆಣ್ಣೆ ತಿನ್ನುವ ಕೃಷ್ಣನನ್ನು ಕಡೆದ ನೆಲೆಯಲ್ಲಿ ಆಚಾರ್ಯರು ಅನ್ನಬ್ರಹ್ಮ ಎಂದು ಉಪಾಸನೆ ಮಾಡಲು ತಿಳಿಸಿದ್ದರು. ಪ್ರತಿಯೊಬ್ಬರ ಬದುಕಿಗೆ ಬೇಕಾದುದು ಅನ್ನ. ಭಗವಂತನನ್ನು ಅನ್ನಬ್ರಹ್ಮನನ್ನಾಗಿ ಉಪಾಸನೆ ಮಾಡಿದಾಗ ಆತನೂ ಸಹ ಅದೇ ರೀತಿಯಾಗಿ ಅನುಗ್ರಹಿಸುತ್ತಾನೆ. ಈ ಜನ್ಮದಲ್ಲಿ ದಾನ ಧರ್ಮಾದಿಗಳಿಂದ ಬದುಕು ಸಾಗಿಸಿದರೆ ಮುಂದಿನ ಜನ್ಮದಲ್ಲಿ ಅನ್ನ, ಮೃಷ್ಟಾನ್ನ ಪ್ರಾಪ್ತವಾಗಲಿದೆ ಎಂದು ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಆಶೀರ್ವಚನದಲ್ಲಿ ನುಡಿದರು.

ಸ್ವಾಗತ ಗೋಪುರ ನಿರ್ಮಾಣ
ಈ ಬಾರಿಯ ಪರ್ಯಾಯ ನಾಡ ಉತ್ಸವದಂತೆ ವಿಶ್ವ ಪರ್ಯಾಯವಾಗಿ ಮೂಡಿ ಬರಲಿದೆ. ದೂರದಿಂದ ಆಗಮಿ ಸುವ ಭಕ್ತರು ಉಡುಪಿಯ ಭಕ್ತರ ಮನೆಯಲ್ಲಿ ತಂಗಲಿದ್ದಾರೆ. ಆದುದರಿಂದ ಇದು “ಎಲ್ಲರ ಪರ್ಯಾಯ’ ಆಗಲಿದೆ. ಪರ್ಯಾಯ ಅವಧಿಯಲ್ಲಿ ಕಲ್ಸಂಕದಲ್ಲಿ ಬೃಹತ್‌ ಸ್ವಾಗತ ಗೋಪುರ ನಿರ್ಮಾಣ, ಮಧ್ವಾಚಾರ್ಯರ ಹಾಗೂ ಶ್ರೀಕೃಷ್ಣನ ಮೂರ್ತಿ ಪ್ರತಿಷ್ಠಾಪನೆ, ಶ್ರೀಕೃಷ್ಣ ಮಠದ ಸಮಗ್ರ ಅಭಿವೃದ್ಧಿ ಚಿಂತನೆಯ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀಪಾದರು ನುಡಿದರು.

ಶ್ರೀಕೃಷ್ಣ ಸೇವಕರಾಗೋಣ
ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಮಾತನಾಡಿ, ಭಕ್ತರ ಸಹಕಾರದೊಂದಿಗೆ ಅಕ್ಕಿ ಮುಹೂರ್ತ ನೆರವೇರಿಸಲಾಗಿದೆ. ಭಗವಂತನ ಸೇವೆ ಭಕ್ತರಿಗೆ ಅತ್ಯಂತ ಪ್ರಿಯವಾದದ್ದು, ಸರ್ವರೂ ಶ್ರೀಕೃಷ್ಣನ ಸೇವಾ ದೀಕ್ಷೆ ಪಡೆಯಬೇಕು ಎಂದರು.

ಶಾಸಕರಾದ ಯಶ್‌ಪಾಲ್‌ ಎ. ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಗಣ್ಯರಾದ ಪ್ರೊ| ಎಂ.ಬಿ. ಪುರಾಣಿಕ್‌, ಎಸ್‌. ಮನೋಹರ ಶೆಟ್ಟಿ, ಶ್ರೀನಾಗೇಶ್‌ ಹೆಗ್ಡೆ, ಕಿಶನ್‌ ಹೆಗ್ಡೆ ಕೊಳ್ಕೆಬೈಲು, ಬಿ. ಜಯಕರ ಶೆಟ್ಟಿ ಇಂದ್ರಾಳಿ, ಪ್ರದೀಪ ಕಲ್ಕೂರ, ಮೂಡುಬಿದಿರೆ ಶ್ರೀಪತಿ ಭಟ್‌, ಕಿನ್ನಿಗೋಳಿಯ ಭುವನಾಭಿರಾಮ ಉಡುಪ, ಕಿರಣ್‌ ಕುಮಾರ್‌ ಬೈಲೂರು, ದಿವಾಕರ ಶೆಟ್ಟಿ ಕಾಪು, ಅರುಣ ಕುಮಾರ್‌ ಶೆಟ್ಟಿ ಪಾದೂರು, ಗಣೇಶ್‌ ಶೆಟ್ಟಿ, ದಯಾನಂದ ಬಂಗೇರ ಹೆಜಮಾಡಿ, ನಟರಾಜ ಹೆಗ್ಡೆ, ಕ್ಯಾ| ಬೃಜೇಶ್‌ ಚೌಟ, ಸಂತೋಷ ಶೆಟ್ಟಿ ತೆಂಕರಗುತ್ತು, ಸತೀಶ್‌ ಶೆಟ್ಟಿ ಗುರ್ಮೆ, ವಿಜಯ ಕರ್ಕೇರ, ಹರಿಕೃಷ್ಣ ಪುನರೂರು, ಬೆಳಪು ದೇವಿಪ್ರಸಾದ್‌ ಶೆಟ್ಟಿ, ಕೀರ್ತಿ ಶೆಟ್ಟಿ ಅಂಬಲಪಾಡಿ, ಅಜಯ್‌ ಪಿ. ಶೆಟ್ಟಿ, ತೋಟದಮನೆ ದಿವಾಕರ ಶೆಟ್ಟಿ, ಶರತ್‌ ಹೆಗ್ಡೆ ಬೆಳ್ಮಣ್ಣು, ಸುನಿಲ್‌ ಶೆಟ್ಟಿ ಕಾಪು, ಕ್ಯಾ| ವಿಜಯ ಶೆಟ್ಟಿ, ವಿದ್ವಾಂಸರಾದ ಪಂಜ ಭಾಸ್ಕರ ಭಟ್‌, ಸಗ್ರಿ ರಾಘವೇಂದ್ರ ಉಪಾಧ್ಯಾಯ, ಕಟೀಲಿನ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಲಕ್ಷ್ಮೀನಾರಾಯಣ ಆಸ್ರಣ್ಣ ಸಹಿತ ಗಣ್ಯರು ಉಪಸ್ಥಿತರಿದ್ದರು. ಹೆರ್ಗ ವೇದವ್ಯಾಸ ಭಟ್‌ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು.

ವಿವಿಧ ಸಂಘ-ಸಂಸ್ಥೆಗಳ ಮುಖ್ಯಸ್ಥರು, ಅಷ್ಟಮಠದ ಪ್ರತಿನಿಧಿಗಳು, ವೈದಿಕರು, ಗಣ್ಯರು, ಅಮೆರಿಕ, ಆಸ್ಟ್ರೇಲಿಯಾದ ಶ್ರೀಪಾದರ ಅಭಿಮಾನಿಗಳು, ಶಿಷ್ಯರು ಭಾಗವಹಿಸಿ ದ್ದರು. ಪುತ್ತಿಗೆ ಶ್ರೀಪಾದರು ಪ್ರಸಾದ ರೂಪವಾಗಿ ಭಕ್ತರಿಗೆ ಮಂತ್ರಾಕ್ಷತೆ ಯೊಂದಿಗೆ ಅಕ್ಕಿಯನ್ನು ವಿತರಿಸಿದರು. ಮಠದ ಅಧಿಕಾರಿಗಳಾದ ಎಂ. ಪ್ರಸನ್ನ ಆಚಾರ್ಯ ಸ್ವಾಗತಿಸಿ, ನಾಗರಾಜ ಆಚಾರ್ಯ ವಂದಿಸಿದರು. ವಿದ್ವಾಂಸ ಬಿ. ಗೋಪಾಲ ಆಚಾರ್ಯ, ಮಹಿತೋಷ ಆಚಾರ್ಯ, ರಮೇಶ ಭಟ್‌ ಕಾರ್ಯಕ್ರಮ ನಿರೂಪಿಸಿದರು.

“ಗೀತಾ ಅಕ್ಕಿ ಮುಡಿ’ ಪುಸ್ತಕ ಬಿಡುಗಡೆ
ಕೋಟಿ ಗೀತಾ ಲೇಖನ ಯಜ್ಞದಲ್ಲಿ ಭಾಗವಹಿಸಲು ಪ್ರೇರಣೆ ದೊರಕಬೇಕೆನ್ನುವ ಉದ್ದೇಶದಿಂದ ಗೀತೆಯ ಸಾರವನ್ನು ಶ್ಲೋಕ-ಚಾಟೋಕ್ತಿ ಮೂಲಕ ಬರೆಯಲಾದ ಓಂಪ್ರಕಾಶ್‌ ಭಟ್‌ ಸಂಪಾದಕತ್ವದ “ಗೀತಾ ಅಕ್ಕಿ ಮುಡಿ’ ಪುಸ್ತಕವನ್ನು ಶ್ರೀಪಾದರು ಬಿಡುಗಡೆಗೊಳಿಸಿದರು.

ವೆಬ್‌ಸೈಟ್‌ ಅನಾವರಣ
ಪ್ರಮೋದ್‌ ಬೆಂಗಳೂರು ಮತ್ತು ಕೃಷ್ಣಪ್ರಸಾದ್‌ ಅವರು ರೂಪಿಸಿದ ಪುತ್ತಿಗೆ ಪರ್ಯಾಯ ಮಠದ ವ್ಯವಸ್ಥೆ ಮತ್ತು ಪಂಚ ಪ್ರಧಾನ ಯೋಜನೆಗಳ ಮಾಹಿತಿಯನ್ನು ಒಳಗೊಂಡ ವೆಬ್‌ಸೈಟ್‌ http://sriputtige.org ಅನ್ನು ಶ್ರೀಪಾದರು ಅನಾವರಣ ಗೊಳಿಸಿದರು.

Scroll to Top