ಇದೆಂಥಾ ನಿಯತ್ತು..!! ಮನೆ ಮಾಲೀಕನನ್ನು ಬಿಟ್ಟು ಕೆಲಸದಾಕೆಯ ಜೊತೆ ಬಸ್ ಹತ್ತಿದ ಶ್ವಾನ

ಉಡುಪಿ: ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಒಂದು ತುತ್ತು ಅನ್ನ ಹಾಕಿದರೆ ಸಾಕು ಇಡೀ ಜನ್ಮಪೂರ್ತಿ ನಮ್ಮ ಜೊತೆ ಇರೋ ಏಕೈಕ ಪ್ರಾಣಿ ಎಂದರೆ ಅದು ಶ್ವಾನ. ಇದಕ್ಕೆ ಸಾಕ್ಷಿ ಎಂಬಂತೆ ಶ್ವಾನದ ಪ್ರೀತಿ ಹಾಗೂ ಪ್ರಾಮಾಣಿಕತೆ ಮುನ್ನಲೆಗೆ ಬಂದಿದೆ. ಮಾಲೀಕ ಜೊತೆ ಇರುವ ಶ್ವಾನವೊಂದು ಮನೆ ಕೆಲಸದ ಮಹಿಳೆಯ ಜೊತೆಯ ಬಸ್ನಲ್ಲಿ ಪ್ರಯಾಣ ಬೆಳೆಸಿರೋ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಉಡುಪಿ ಅಮ್ಮುಂಜೆಯ ಸರಸ್ವತಿ ನಗರದಲ್ಲಿ‌ ಮನೆ ಕೆಲಸದಾಕೆಯ ಪ್ರೀತಿಯ ಆರೈಕೆಗೆ ಶ್ವಾನ ಮನಸೋತು ಆಕೆಯೊಂದಿಗೆ ತೆರಳಲು‌ ನಿರ್ಧರಿಸಿದೆ. ಅದರಂತೆ ಮಹಿಳೆಯೊಂದಿಗೆ ಬಸ್ ನಿಲ್ದಾಣದವರೆಗೂ ತೆರಳಿದ್ದು, ಬಸ್ ಬರುತ್ತಿದ್ದಂತೆ ಮಹಿಳೆಯೊಂದಿಗೆ ಬಸ್ ಏರಿದೆ. ಬಸ್ ನಿರ್ವಾಹಕ ಶ್ವಾನವನ್ನು ಇಳಿಸಲು ಎಷ್ಟೇ‌ ಪ್ರಯತ್ನ ಪಟ್ಟರೂ ಶ್ವಾನ ಮಾತ್ರ ಬಸ್ನಿಂದ ಕೆಳಗೆ ಇಳಿಯದೇ ಮನೆ ಕೆಲಸದಾಕೆಯ ಜೊತೆ ನಿಂತುಕೊಂಡಿದೆ. ಬಳಿಕ ಸ್ವತಃ ಮನೆ ಕೆಲಸದ ಮಹಿಳೆಯೇ ಬಸ್ನಿಂದ ಇಳಿದ ಕೂಡಲೇ ಶ್ವಾನ ಕೂಡ ಇಳಿದಿದೆ.

ಶ್ವಾನವು ಸಾಕಿದ ಮನೆಯ ಯಜಮಾನರನ್ನು ಬಿಟ್ಟು, ತನ್ನನ್ನು ಆರೈಕೆ ಮಾಡಿದ ಮಹಿಳೆಗೆ ತನ್ನ ಗೌರವವನ್ನು ಸಮರ್ಪಿಸಿದೆ. ಈ ಶ್ವಾನದ ಪ್ರೀತಿ ಕಂಡು ಬಸ್ಸಿನಲ್ಲಿದ್ದ ಪ್ರಯಾಣಿಕರು ಅಚ್ಚರಿ ಪಟ್ಟಿದ್ದಾರೆ..

You cannot copy content from Baravanige News

Scroll to Top