ನವದೆಹಲಿ : ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಅವಕಾಶ ನೀಡಬೇಕು ಎಂದು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಸುಪ್ರಿಂಕೋರ್ಟ್ ವಜಾಗೊಳಿಸಿದೆ. ಮಾತ್ರವಲ್ಲದೇ ಈ ವಿಚಾರದಲ್ಲಿ ತಾನು ಮದ್ಯಪ್ರವೇಶಿಸುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
ವಕೀಲ ಜಯ ಸುಕಿನ್ ಎಂಬವರು ಲೋಕಸಭೆ ಸೆಕ್ರೆಟರಿಯೇಟ್ ಉದ್ಘಾಟನೆಗೆ ರಾಷ್ಟ್ರಪತಿಗಳನ್ನು ಆಹ್ವಾನಿಸದೆ ಸಂವಿಧಾನ ಉಲ್ಲಂಘಿಸಿದೆ ಎಂದು ಆರೋಪಿಸಿ ರಾಷ್ಟ್ರಪತಿಗಳಿಂದ ಉದ್ಘಾಟನೆ ಮಾಡಿಸಲು ನಿರ್ದೇಶನ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.
ಇನ್ನು ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿರುವ ನೂತನ ಸಂಸತ್ ಭವನದ ಸಮಾರಂಭವನ್ನು ಬಹಿಷ್ಕರಿಸುವ ನಿರ್ಧಾರವನ್ನು 20 ಪ್ರತಿಪಕ್ಷಗಳು ಪ್ರಕಟಿಸಿವೆ.
“ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗೊತ್ತಿರುವ ಪ್ರಧಾನಿ ಮೋದಿಯವರು ಹೊಸ ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ನಿರ್ಧಾರವು ಘೋರ ಅವಮಾನ ಮಾತ್ರವಲ್ಲ, ಇದು ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ” ಎಂದು ತಮ್ಮ ಜಂಟಿ ಹೇಳಿಕೆಯಲ್ಲಿ ವಿರೋಧ ಪಕ್ಷಗಳು ಹೇಳಿವೆ.