ಮಂಗಳೂರು ವಿಮಾನ ನಿಲ್ದಾಣದಲ್ಲಿ 1.69 ಕೋಟಿ ಮೌಲ್ಯದ ವಜ್ರ ವಶಕ್ಕೆ

ಮಂಗಳೂರು, ಮೇ.29: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನೊಬ್ಬನಿಂದ 1.69 ಕೋಟಿ ರೂ.ಮೌಲ್ಯದ ವಜ್ರದ ಹರಳುಗಳನ್ನು ಜಪ್ತಿ ಮಾಡಲಾಗಿದೆ.

ಮೇ 25 ರಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಭದ್ರತಾ ತಪಾಸಣೆಯ ವೇಳೆ ಸಿಐಎಸ್ಎಫ್ ಸಿಬಂದಿ ದುಬೈಗೆ ತೆರಳುತ್ತಿದ್ದ ಪ್ರಯಾಣಿಕರನ್ನು ತಡೆದಿದ್ದಾರೆ ಎಂದು ಕಸ್ಟಮ್ಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಬೆಲೆಬಾಳುವ ಹರಳುಗಳಿರುವ ಶಂಕೆಯ ಮೇರೆಗೆ ಆತನ ಒಳ ಉಡುಪಿನಲ್ಲಿ ಬಚ್ಚಿಟ್ಟಿದ್ದ 2 ಪೌಚ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಸರಗೋಡು ಮೂಲದ ಪ್ರಯಾಣಿಕನನ್ನು ಹೆಚ್ಚಿನ ತನಿಖೆಗಾಗಿ ಸಿಐಎಸ್‌ಎಫ್ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ. ಎರಡು ಪೌಚ್‌ಗಳಲ್ಲಿ ಒಟ್ಟು 306.21 ಕ್ಯಾರೆಟ್‌ಗಳಷ್ಟು ತೂಕದ ವಿವಿಧ ಗಾತ್ರದ ವಜ್ರಗಳೊಂದಿಗೆ 13 ಚಿಕ್ಕ ಪ್ಯಾಕೆಟ್‌ಗಳು ಕಂಡುಬಂದಿದ್ದು, ಇದರ ಮೌಲ್ಯ ರೂ.1.69 ಕೋಟಿಯಾಗಿದೆ. ಪ್ರಯಾಣಿಕನನ್ನು ಬಂಧಿಸಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಚ್ಚಿನ ತನಿಖೆಗಳು ಪ್ರಗತಿಯಲ್ಲಿವೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

You cannot copy content from Baravanige News

Scroll to Top