ನಿನ್ನೆ ನರೇಂದ್ರ ಮೋದಿ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 16 ಹೈವೋಲ್ಟೇಜ್ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಗೆದ್ದು ಬೀಗಿದೆ. ಈ ಮೂಲಕ 5ನೇ ಬಾರಿಗೆ ಐಪಿಎಲ್ ಟ್ರೋಫಿಗೆ ಧೋನಿ ಪಡೆ ಮುತ್ತಿಟ್ಟಿದೆ.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ನಿಗದಿತ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 214 ರನ್ ಕಲೆ ಹಾಕಿತ್ತು. ಗುಜರಾತ್ ಪರ ವೃದ್ಧಿಮಾನ್ ಸಾಹ ಬಿರುಸಿನ ಬ್ಯಾಟಿಂಗ್ ಮಾಡಿ 39 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ನೊಂದಿಗೆ 54 ರನ್ ಸಿಡಿಸಿ ಕ್ಯಾಚ್ ನೀಡಿ ತೆರಳಿದರು. ಇದಕ್ಕೂ ಮುನ್ನ ದಾಖಲೆಗಳ ಸರದಾರ ಶುಭ್ಮನ್ ಗಿಲ್ ಕೇವಲ 20 ಬಾಲ್ನಲ್ಲಿ 7 ಫೋರ್ ಸಮೇತ 39 ರನ್ ಸಿಡಿಸಿ ಸ್ಟಂಪ್ ಔಟ್ ಆದ್ರು.
ಕ್ರೀಸ್ನಲ್ಲಿ ಕೊನೆವರೆಗೂ ನಿಂತು ಆಡಿದ ಸಾಯಿ ಸುದರ್ಶನ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲರ್ಗಳ ಮೇಲೆ ದಂಡ ಯಾತ್ರೆ ಮಾಡಿದ್ರು. 200ಕ್ಕೂ ಹೆಚ್ಚು ಸ್ಟ್ರೈಕ್ ರೇಟ್ನೊಂದಿಗೆ ಬ್ಯಾಟ್ ಬೀಸಿ ಕೇವಲ 47 ಬಾಲ್ನಲ್ಲಿ 6 ಸಿಕ್ಸರ್, 8 ಫೋರ್ ಸಮೇತ 97 ರನ್ ಸಿಡಿಸಿ ಶತಕ ವಂಚಿತರಾದರು. ಹಾರ್ದಿಕ್ ಪಾಂಡ್ಯ 12 ಬಾಲ್ನಲ್ಲಿ 2 ಸಿಕ್ಸರ್ ಸಮೇತ 21 ರನ್ ಬಾರಿಸಿದರು.
ಎರಡನೇ ಇನ್ನಿಂಗ್ಸ್ಗೆ ಇಂದು ಕೂಡ ಮಳೆರಾಯ ಅಡ್ಡಿಯಾದ. ಬ್ಯಾಟಿಂಗ್ ಶುರು ಮಾಡುವ ಮುನ್ನವೇ ಪಂದ್ಯಕ್ಕೆ ಮಳೆ ವಕ್ಕರಿಸಿತು. ಮಧ್ಯರಾತ್ರಿ 12 ಗಂಟೆಯಾದ್ರೂ ಪಂದ್ಯ ಸ್ಟಾರ್ಟ್ ಆಗದ ಕಾರಣ ಡಕ್ ವರ್ತ್ ನಿಯಮದನ್ವಯ 5 ಓವರ್ ಕಡಿಮೆ ಮಾಡಿ 15 ಓವರ್ಗೆ ಸಿಎಸ್ಕೆಗೆ 171 ರನ್ ಟಾರ್ಗೆಟ್ ಕೊಡಲಾಯ್ತು.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಡಕ್‌ವರ್ತ್ ನಿಯಮದ ಪ್ರಕಾರ 15 ಓವರ್ಗಳಲ್ಲಿ 171 ರನ್ ದಾಖಲಿಸಬೇಕಿತ್ತು. ಚೆನ್ನೈ ಪರ ಓಪನರ್ ಆಗಿ ಬಂದ ಡಿವೋನ್ ಕಾನ್ವೇ ಗುಜರಾತ್ ತಂಡದ ಬೌಲರ್ಸ್ ಬೆಂಡೆತ್ತಿದ್ರು. ಕೇವಲ 25 ಬಾಲ್ನಲ್ಲಿ 2 ಸಿಕ್ಸರ್, 4 ಫೋರ್ ಸಮೇತ 47 ರನ್ ಸಿಡಿಸಿದರು. ಹಾಗೆಯೇ ಗಾಯಕ್ವಾಡ್ ಕೂಡ ಕೇವಲ 16 ಬಾಲ್ನಲ್ಲಿ 1 ಸಿಕ್ಸರ್, 3 ಫೋರ್ 26 ರನ್ ಚಚ್ಚಿ ಉತ್ತಮ ಆರಂಭ ನೀಡಿದ್ರು.
ಇನ್ನೊಂದೆಡೆ ಕ್ರೀಸ್ಗೆ ಬಂದ ರಹಾನೆ ಕೇವಲ 14 ಬಾಲ್ನಲ್ಲಿ 2 ಸಿಕ್ಸರ್ ಸಮೇತ 25 ರನ್ ಸಿಡಿಸಿ ಔಟಾದ್ರು. ಅಂಬಾಟಿ ರಾಯುಡು ಕೇವಲ 8 ಬಾಲ್ನಲ್ಲಿ 2 ಸಿಕ್ಸರ್, 1 ಫೋರ್ ಸಮೇತ 19 ರನ್ ಬಾರಿಸಿದರು. ಶಿವಂ ದುಬೆ ಕೊನೇವರೆಗೂ ನಿಂತು ಕೇವಲ 21 ಬಾಲ್ನಲ್ಲಿ 2 ಸಿಕ್ಸರ್ ಸಮೇತ 32 ರನ್ ಗಳಿಸಿದ್ರು. ಕೊನೆಗೆ ಬಂದ ರವೀಂದ್ರ ಜಡೇಜಾ ಕೊನೇ 2 ಬಾಲ್ಗೆ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಅಂಡ್ ಫೋರ್ ಸಿಡಿಸಿ ಚೆನ್ನೈ ತಂಡವನ್ನು ಗೆಲ್ಲಿಸಿದ್ರು. ಚೆನ್ನೈ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ಗೆ 171 ರನ್ ಸಿಡಿಸಿ ಗೆದ್ದು ಬೀಗಿದೆ.