ಉಡುಪಿ : ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಕೇಂದ್ರದ ಅವ್ಯವಸ್ಥೆಯ ವಿರುದ್ಧ ರೋಗಿಗಳಿಂದ ಪ್ರತಿಭಟನೆ

ಉಡುಪಿ: ಜಿಲ್ಲಾಸ್ಪತ್ರೆಯ ಡಯಾಲಿಸಿಸ್‌ ಕೇಂದ್ರದ ಅವ್ಯವಸ್ಥೆಯ ವಿರುದ್ಧ ಡಯಾಲಿಸಿಸ್‌ ರೋಗಿಗಳು ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಕೇಂದ್ರವನ್ನು ಗುತ್ತಿಗೆ ಪಡೆದಿರುವ ಎಸ್ಕಗ್‌ ಸಂಜೀವಿನಿ ಸಂಸ್ಥೆಯ ನಿರ್ವ ಹಣೆ ಕಳಪೆಯಾಗಿದ್ದು, ವ್ಯವಸ್ಥಿತವಾಗಿ ಯಾವುದೂ ನಡೆಯುತ್ತಿಲ್ಲ. ಈ ಸಂಸ್ಥೆಗೆ ಜಿಲ್ಲಾಸ್ಪತ್ರೆಯವರು ಕೇಂದ್ರವನ್ನು ಬಿಟ್ಟು ಕೊಡುವಾಗ ಒಟ್ಟು 14 ಡಯಾಲಿಸಿಸ್‌ ಯಂತ್ರಗಳಿದ್ದವು. ಅವುಗಳ ಪೈಕಿ ಪ್ರಸ್ತುತ ಏಳು ಯಂತ್ರಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಉಳಿದವು ಹಾಳಾಗಿದ್ದು, ಅದನ್ನು ದುರಸ್ತಿ ಕೂಡ ಮಾಡಿಲ್ಲ. ಕೇಂದ್ರದ ಅವ್ಯವಸ್ಥೆಯಿಂದ ಕಳೆದ ಒಂದು ವರ್ಷದಲ್ಲಿ 30 ರೋಗಿಗಳು ಮೃತಪಟ್ಟಿದ್ದಾರೆ ಎಂದು ಧರಣಿ ನಿರತರು ಆರೋಪಿಸಿದರು.

ಕೇಂದ್ರದಲ್ಲಿ ಒಟ್ಟು 60 ರೋಗಿಗಳು ಡಯಾಲಿಸಿಸ್‌ ಮಾಡುತ್ತಿದ್ದಾರೆ. ಈ ಎಲ್ಲ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಆಗ್ರಹಿಸಿ ರೋಗಿಗಳು ಜಿಲ್ಲಾ ಸರ್ಜನ್‌, ಜಿಲ್ಲಾಧಿಕಾರಿ, ಶಾಸಕರಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಡಯಾಲಿಸಿಸ್‌ಗೆ ಸಂಬಂಧಿಸಿ ತುಂಬಾ ಸಮಸ್ಯೆ ಇದೆ. ಸರಿಯಾಗಿ ಕ್ಲೀನ್‌ ಆಗುತ್ತಿಲ್ಲ. ಸಿಬಂದಿಗಳಿಲ್ಲದೆ ಸಮಯಕ್ಕೆ ಸರಿಯಾಗಿ ಡಯಾಲಿಸಿಸ್‌ ಆಗುತ್ತಿಲ್ಲ. ಅವರು ಏನು ಮಾಡಿದರೂ ನಾವು ಕೇಳಬೇಕು. ಆದುದರಿಂದ ಸರಕಾರ ಕೂಡಲೇ ಹೊಸ ಯಂತ್ರ ಅಳವಡಿಸಿ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಎಂದು ಧರಣಿ ನಿರತರು ಆಗ್ರಹಿಸಿದರು.

ಶಾಸಕರಿಂದ ಪರಿಶೀಲನೆ


ಧರಣಿಯ ಹಿನ್ನೆಲೆಯಲ್ಲಿ ಶಾಸಕ ಯಶ್‌ಪಾಲ್‌ ಸುವರ್ಣ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಡಯಾಲಿಸಿಸ್‌ ಕೇಂದ್ರ ವನ್ನು ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾ ಸರ್ಜನ್‌ ಡಾ| ಸುದೇಶ್‌ ಕುಮಾರ್‌ ಅವರೊಂದಿಗೆ ಮಾತುಕತೆ ನಡೆಸಿದರು. ಧರಣಿ ನಿರತ ರೋಗಿಗಳನ್ನು ಸಂತೈಸಿದ ಅವರು, ಇಲ್ಲಿನ ಸಮಸ್ಯೆಯನ್ನು ಕೂಡಲೇ ಬಗೆಹರಿಸುವುದಾಗಿ ಭರವಸೆ ನೀಡಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ, ಸರಕಾರ ಸಂಜೀವಿನಿ ಎಂಬ ಸಂಸ್ಥೆಗೆ ರಾಜ್ಯದ 120 ಸರಕಾರಿ ಆಸ್ಪತ್ರೆಗಳ ಡಯಾಲಿಸಿಸ್‌ ಕೇಂದ್ರವನ್ನು ಗುತ್ತಿಗೆಗೆ ವಹಿಸಿಕೊಟ್ಟಿದೆ. ಆದರೆ ಅವರ ಕೆಲವೊಂದು ಸಮಸ್ಯೆಯಿಂದಾಗಿ ಉಡುಪಿಯ ಬಡ ರೋಗಿಗಳು ತೊಂದರೆ ಅನು ಭವಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಜತೆ ಕೂಡ ಮಾತನಾಡಿದ್ದು, ಸಂಜೀವಿನಿ ಸಂಸ್ಥೆಯವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ತಿಳಿಸಿದ್ದೇನೆ. ಅಲ್ಲದೆ ಸಂಸ್ಥೆಯ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ ಎಂದರು.

Scroll to Top