ಮಹಿಳೆಯರಿಗೆ ಉಚಿತ ಬಸ್ ಸಂಚಾರ ಭಾಗ್ಯ ಫಿಕ್ಸ್ : ಸಾರಿಗೆ ಇಲಾಖೆ ಲೆಕ್ಕಾಚಾರ ಏನು..!??

ಬೆಂಗಳೂರು: ಚುನಾವಣೆ ಮುನ್ನ ಕಾಂಗ್ರೆಸ್ ಘೋಷಿಸಿದ್ದ ಗ್ಯಾರಂಟಿಗಳನ್ನ ಕೊಟ್ಟ ಮಾತಿನಂತೆ ಈಡೇರಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಎಲ್ಲಾ ಹೆಣ್ಮಕ್ಕಳಿಗೂ ಷರತ್ತು ರಹಿತವಾಗಿ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿಯ ಸಾಮಾನ್ಯ ಬಸ್‌ಗಳಲ್ಲಿ ಸಂಚಾರಕ್ಕೆ ಮುಕ್ತ ಅವಕಾಶ ನೀಡುವ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಘೋಷಣೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಂಗಳವಾರ ಸಾರಿಗೆ ಇಲಾಖೆ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದರು. ಯಾವ ಕಂಡೀಷನ್ಸ್, ಗೈಡ್‌ಲೈನ್ಸ್ ಇಲ್ಲ. ಕೆಲಸಕ್ಕೆ ಹೋಗೋರು, ಕೆಲಸಕ್ಕೆ ಹೋಗದೇ ಇರುವವರು, ಎಪಿಎಲ್, ಬಿಪಿಎಲ್ ಎಂಬ ತಾರತಮ್ಯ ಇಲ್ಲ. ಮಹಿಳೆಯರು ರಾಜ್ಯಾದ್ಯಂತ ಸಂಚರಿಸಬಹುದು ಎಂದು ರಾಮಲಿಂಗಾರೆಡ್ಡಿ ಸ್ಪಷ್ಟ ಪಡಿಸಿದ್ದಾರೆ. ಆದರೆ ಯಾವಾಗಿಂದ ಈ ಗ್ಯಾರಂಟಿ ಜಾರಿ ಅನ್ನೋದರ ಗುಟ್ಟನ್ನು ಮಾತ್ರ ಬಿಟ್ಟುಕೊಡಲಿಲ್ಲ.

ಸಾರಿಗೆ ಇಲಾಖೆ ಲೆಕ್ಕ ಏನು..??

* ನಿತ್ಯ ಸರ್ಕಾರಿ ಬಸ್‌ಗಳಲ್ಲಿ ಸಂಚಾರ – 85 ಲಕ್ಷ ಮಂದಿ (ಅಂದಾಜು)
* ನಿತ್ಯ ಸಂಚರಿಸುವ ಮಹಿಳೆಯರು – 43 ಲಕ್ಷ ಮಂದಿ (ಅಂದಾಜು)
* ಉಚಿತ ಸಂಚಾರ ಘೋಷಣೆಯಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಬಹುದು

ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಎಲ್ಲಾ ಜಿಲ್ಲೆಗಳಲ್ಲಿ ಪ್ರಯಾಣಿಸುತ್ತಿರುವವರ ಅಂಕಿ-ಅಂಶ ವಿವರವನ್ನ ನೀಡಲಾಗಿದೆ. ಆಯಾ ನಿಗಮಗಳಲ್ಲಿ ಪ್ರಯಾಣಿಕರೆಷ್ಟು ಅನ್ನೋ ಅಂಕಿ-ಅಂಶಗಳ ಸಂಪೂರ್ಣ ಮಾಹಿತಿಯನ್ನು ಸಚಿವರು ಪಡೆದಿದ್ದಾರೆ. ಸಾರಿಗೆ ನಿಗಮದಲ್ಲಿ ತೈಲಗಳಿಗೆ ಆಗುವ ವೆಚ್ಚಗಳ ಮಾಹಿತಿ, ಸಿಬ್ಬಂದಿಯ ವೇತನ ವೆಚ್ಚ ಹಾಗೂ ಆಗುವ ನಷ್ಟದ ಕುರಿತು ಸಚಿವರಿಗೆ ವಿವರವಾಗಿ ತಿಳಿಸಲಾಗಿದೆ. 4 ನಿಗಮಗಳು ಯಾವ ರೀತಿ ಕೆಲಸ ಮಾಡುತ್ತಿವೆ? ಯಾವ ಇಲಾಖೆಯ ಆದಾಯ ಹಾಗೂ ನಷ್ಟ ಎಷ್ಟು ಎಂಬ ಮಾಹಿತಿಯನ್ನು ಸಚಿವರು ಸಂಗ್ರಹಿಸಿದ್ದಾರೆ.

ಇಂದು (ಬುಧವಾರ) ಸಿಎಂ ಹಾಗೂ ಸಚಿವರ ಸಭೆ ನಡೆಯಲಿದೆ. ಜೂನ್ 1ಕ್ಕೆ ಕ್ಯಾಬಿನೆಟ್ ಸಭೆ ನಡೆಯಲಿದ್ದು, ಅಂದು ಮಹಿಳೆಯರ ಉಚಿತ ಪ್ರಯಾಣದ ಗ್ಯಾರಂಟಿ ಅಧಿಕೃತವಾಗಿ ಘೋಷಣೆಯಾಗಲಿದೆ. ಪ್ರಣಾಳಿಕೆಯಲ್ಲಿ ಹೇಳಿದಂತೆ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಅಂತ ಸಚಿವರೇನೋ ಹೇಳಿದ್ದಾರೆ. ಆದರೆ ಯಾವಾಗಿನಿಂದ ಅನ್ನೋದು ಕ್ಯಾಬಿನೆಟ್ ಸಭೆ ಬಳಿಕ ಸ್ಪಷ್ಟವಾಗಲಿದೆ.

Scroll to Top