ಕುಂದಾಪುರ: ಬ್ರಹ್ಮಾವರ ತಾಲೂಕಿನ ಕೋಡಿ ಕನ್ಯಾನದ ಸಮುದ್ರತೀರದಲ್ಲಿ ಅನಾದಿ ಕಾಲದಿಂದ ಮನೆ ಕಟ್ಟಿ ಕುಳಿತ ಬಡವರಿಗೆ ವಿವಿಧ ಕಾರಣಗಳಿಂದ ಹಕ್ಕುಪತ್ರ ಮಂಜೂರಾಗಿರಲಿಲ್ಲ. ಅಂದಿನ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹಾಗೂ ಅಂದಿನ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಯತ್ನದಿಂದ ಜಾಗ ಮಂಜೂರಾಗಿದ್ದು ಜನರಿಂದ ಸರಕಾರಕ್ಕೆ ಕಟ್ಟಬೇಕಾದ ಮೊತ್ತ ಅಧಿಕವಿದೆ. ಇದನ್ನು ಕಡಿಮೆ ಮಾಡಲು ಸರಕಾರಿ ಹಂತದಲ್ಲಿ ಪ್ರಯತ್ನಿಸಲಾಗುವುದು ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.
ಮಾಧ್ಯಮದವರ ಜೊತೆ ಮಾತನಾಡಿ, ಕೋಡಿ ಕನ್ಯಾನ ಮತ್ತು ಹೊಸಬೆಂಗ್ರೆಯ ಜನರ ಭೂಮಿ ಹಕ್ಕಿನ ಕನಸು ಇತ್ತೀಚೆಗೆ ನನಸಾಯಿತು. ಒಟ್ಟು 161 ಕುಟುಂಬಗಳಿಗೆ ಸರಕಾರಿ ಭೂಮಿ ಮಂಜೂರಾತಿ ಆದೇಶ ಆಗಿದೆ. 178ಜನರಿಗೆ ಪರಂಬೋಕು ಜಮೀನು ಮಂಜೂರಾಗಿದೆ. 132 ಜನರಿಗೆ ಸಮುದ್ರ ತೀರ ಎಂದು ನಮೂದಾಗಿದ್ದ ಜಮೀನು ಮಂಜೂರಾಗಲು ಸಚಿವ ಸಂಪುಟದ ಅನುಮೋದನೆ ಬಾಕಿ ಇದೆ. ಇಲ್ಲಿ ಸೆಂಟ್ಸ್‌ಗೆ 5 ಸಾವಿರ ರೂ. ಕಟ್ಟಿಸಲಾಗುತ್ತಿದ್ದು ಬಡವರಿಗೆ ಕಷ್ಟವಾಗುತ್ತಿದೆ. ಮಲ್ಪೆಯಲ್ಲಿ ಇಂತಹ ಪ್ರಕರಣದಲ್ಲಿ ಸೆಂಟ್ಸ್‌ಗೆ 500 ರೂ. ಕಟ್ಟಿಸಲಾಗಿದ್ದು ಅದೇ ಮಾದರಿಯಲ್ಲಿ ಇಲ್ಲಿಯೂ ಹಣ ಪಾವತಿಗೆ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದರು.
ಕೋಡಿ ಕನ್ಯಾನ ಮತ್ತು ಹೊಸ ಬೆಂಗ್ರೆ ಜನತೆಯ ಈ ಭೂಮಿ ಹಕ್ಕಿನ ಬಗ್ಗೆ ದಶಕಗಳಿಂದಲೂ ಹಲವು ಮಾದರಿಯಲ್ಲಿ ಹೋರಾಟಗಳು ನಡೆದಿದ್ದವು. ಎಲ್ಲ ದಾಖಲೆಗಳ ಸಂಗ್ರಹದ ಮೂಲಕ ಹಾಲಾಡಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳು ಮತ್ತು ಸಿಆರ್‌ಝಡ್ ಅಧಿಕಾರಿಗಳ ಸಭೆ ನಡೆಸಿ ನಿರಾಕ್ಷೇಪಣ ಪತ್ರಕೊಡುವಂತೆ ಮಾಡಿ, ಕಡತವನ್ನು ಬೆಂಗಳೂರಿಗೆ ಒಯ್ದು ಸಚಿವಾಲಯದ ಹಿಂದೆ ಬಿದ್ದರು. ವಿಧಾನಸೌಧದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಸಚಿವರು ಮತ್ತು ಶಾಸಕರ ಸಮ್ಮುಖದಲ್ಲಿ ಕೋಟ ಶ್ರೀನಿವಾಸ ಪೂಜಾರಿಯವರು ಸಭೆ ಕರೆದರು. ಹೀಗೆ ನೂರಾರು ಮನೆಯವರಿಗೆ ಹಕ್ಕುಪತ್ರ ದೊರೆಯುವಂತಾಗಿದೆ ಎಂದರು.