ಬೆಂಗಳೂರು : ಬಸ್‌ಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರಿಗೆ ಆಸನ ಮೀಸಲಿಟ್ಟಿರುವ ಕುರಿತು ಫಲಕ ಅಳವಡಿಸುವುದು ಸಹಜ. ಆದರೆ, ಇನ್ನು ಮುಂದೆ ರಾಜ್ಯ ಕರ್ನಾಟಕ ಸಾರಿಗೆ ಬಸ್‌ಗಳಲ್ಲಿ ಶೇ.50ರಷ್ಟು ಆಸನಗಳು ಪುರುಷರಿಗೆ ಮೀಸಲಾಗಲಿವೆ. ಈ ರೀತಿ ಪುರುಷರಿಗೆ ಶೇ.50ರಷ್ಟು ಆಸನ ಮೀಸಲು ವ್ಯವಸ್ಥೆ ತಂದ ದೇಶದ ಮೊದಲ ರಾಜ್ಯ ಎಂಬ ಘನತೆಗೆ ಕರ್ನಾಟಕ ಪಾತ್ರವಾಗಲಿದೆ.
ಹೌದು, ಇನ್ನು ಮುಂದೆ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಪುರುಷರಿಗೆ ಆಸನ ಮೀಸಲು ಎಂಬ ಫಲಕ ಬರಲಿದೆ. ಜೂ.11ರಿಂದ ‘ಶಕ್ತಿ’ ಯೋಜನೆಯಡಿ ಕೆಎಸ್‌ಆರ್‌ಟಿಸಿ, ನಗರ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಜಾರಿಯಾಗಲಿದೆ. ಹೀಗಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಶೇ.50ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಲು ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿದೆ.
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಲಭ್ಯವಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಸ್ ಪ್ರಯಾಣಕ್ಕೆ ಮುಂದಾಗುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಟಿಕೆಟ್ ಪಡೆದು ಪ್ರಯಾಣ ಮಾಡುವ ಪುರುಷರಿಗೆ ಆಸನ ಕೊರತೆಯಾಗಬಹುದು. ಇದರಿಂದ ಸಾರಿಗೆ ಸಂಸ್ಥೆಗಳ ಆದಾಯಕ್ಕೆ ಮತ್ತಷ್ಟು ಕತ್ತರಿ ಬೀಳಲಿದೆ. ಹೀಗಾಗಿ ಪುರುಷರಿಗೆ ಬಸ್‌ಗಳಲ್ಲಿ ಆಸನಗಳನ್ನು ಮೀಸಲಿಡಲಾಗುತ್ತಿದೆ. ಆದರೆ, ಬಿಎಂಟಿಸಿಯಲ್ಲಿ ಪುರುಷ ಸೀಟು ಮೀಸಲಾತಿ ಇಲ್ಲ.