ಕಟೀಲು ಕ್ಷೇತ್ರದಲ್ಲಿ ಬತ್ತಿ ಹೋದ ನಂದಿನಿ ನದಿ : 31 ವರ್ಷಗಳ ಬಳಿಕ ತೀವ್ರ ಜಲಕ್ಷಾಮ

ಮಂಗಳೂರು : ಮುಂಗಾರು ಮಳೆ ಆರಂಭವಾಗದ ಹಿನ್ನಲೆ ದಕ್ಷಿಣಕನ್ನಡ ಇದೀಗ ಭೀಕರ ಜಲಕ್ಷಾಮ ಎದುರಿಸುವ ಹಂತಕ್ಕೆ ತಲುಪಿದ್ದು, ಜಿಲ್ಲೆಯ ಬಹುತೇಕ ನದಿಗಳು ಬರಡಾಗಿದ್ದು, ಮಳೆ ಬರೆದಿದ್ದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ.

ಈಗಾಗಲೇ ಮಳೆ ಇಲ್ಲದ ಕಾರಣ ಕಟೀಲು ದೇವಸ್ಥಾನದ ಬಳಿ ಹರಿಯುವ ನಂದಿನಿ ನದಿ ಸಂಪೂರ್ಣ ಬತ್ತಿದ್ದು, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜಲಕ್ಷಾಮ ಉಂಟಾಗಿದೆ. ದೇವಸ್ಥಾನದ ದೈನಂದಿನ ಚಟುವಟಿಕೆಗೆ ಅಡ್ಡಿಯಾಗಿದ್ದು, ಕ್ಷೇತ್ರದ ಶಿಕ್ಷಣ ಸಂಸ್ಥೆಗಳ ಪ್ರಾಥಮಿಕ–ಪ್ರೌಢ ವಿಭಾಗಗಳಲ್ಲಿ ಬೆಳಿಗ್ಗೆ ಮಾತ್ರ ತರಗತಿ ನಡೆಸಿ ಮಧ್ಯಾಹ್ನದ ನಂತರ ರಜೆ ನೀಡಲಾಗುತ್ತಿದೆ.

ಭಕ್ತರು ದೇವಸ್ಥಾನದ ಒಳಗೆ ಪ್ರವೇಶಿಸುವಾಗ ಕೈ-ಕಾಲು ತೊಳೆಯುವ ನೀರನ್ನು ಬಂದ್ ಮಾಡಲಾಗಿದೆ. ಬೆಳಿಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಸಮಯದಲ್ಲಿ ಅನ್ನಪ್ರಸಾದಕ್ಕೆ ಸ್ಟೀಲ್ ತಟ್ಟೆಗಳ ಬದಲಿಗೆ ಹಾಳೆತಟ್ಟೆ ಬಳಸಲಾಗುತ್ತಿದೆ. ದೇವಸ್ಥಾನದ ಆವರಣದಲ್ಲಿನ ಮೂರು ಕೊಳವೆಬಾವಿಗಳು ಹಾಗೂ ಮೂರು ಬಾವಿಗಳು ಬತ್ತಿವೆ.

ದೇವಸ್ಥಾನ, ಅನ್ನಪ್ರಸಾದ ತಯಾರಿ ಹಾಗೂ ಗೋಶಾಲೆಗೆ ನಿತ್ಯ 7 ಲಕ್ಷ ಲೀಟರ್‌ ನೀರಿನ ಅವಶ್ಯಕತೆ ಇದೆ. ಈಗ 4 ಲಕ್ಷ ಲೀಟರ್‌ ನೀರು ಸುತ್ತಮುತ್ತಲಿನ ದಾನಿಗಳ ಸಹಾಯದಿಂದ ಸಿಗುತ್ತಿದ್ದು, ಅದರಲ್ಲಿಯೇ ಎಲ್ಲವನ್ನು ಹೊಂದಿಸಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರು ಸಂಗ್ರಹಿಸಲೆಂದೇ ನಿತ್ಯ ನಾಲ್ವರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

Scroll to Top