ಕಾಂಗ್ರೆಸ್ ಗ್ಯಾರಂಟಿಗಳಿಂದಲೇ ನಮಗೆ ಸೋಲು : ಬಿಜೆಪಿ ಆತ್ಮಾವಲೋಕನ ಸಭೆಯಲ್ಲಿ ಏನಾಯ್ತು..!??

ಬೆಂಗಳೂರು: ಕರ್ನಾಟಕದ ಚುನಾವಣೆಯಲ್ಲಿ ಸೋತ ಬಿಜೆಪಿ ಆತ್ಮಾವಲೋಕನ ಸಭೆ ನಡೆಸಿ ಸೋಲಿಗೆ ಕಾರಣ ಹುಡುಕುವ ಪ್ರಯತ್ನ ನಡೆಸಿದೆ. ಸಭೆಯಲ್ಲಿ ಕಾಂಗ್ರೆಸ್‍ನ ಗ್ಯಾರಂಟಿಗಳಿಂದಲೇ ಸೋಲಾದ ಬಗ್ಗೆ ಹೆಚ್ಚಿನವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿಯ ಪ್ರಣಾಳಿಕೆ ಕಾಂಗ್ರೆಸ್‍ನ ಪ್ರಣಾಳಿಕೆಯಷ್ಟು ಚೆನ್ನಾಗಿರಲಿಲ್ಲ. ಕಾಂಗ್ರೆಸ್ ನಾಯಕರು ಪ್ರಚಾರದ ಕಡೆ 5 ಗ್ಯಾರಂಟಿಗಳ ಬಗ್ಗೆಯೇ ಮಾತನಾಡುತ್ತಿದ್ದರು. ನಮ್ಮ ಭರವಸೆಗಳು ಜನರನ್ನು ತಲುಪುವಲ್ಲಿ ವಿಫಲವಾಗಿದ್ದೆ ಸೋಲಿಗೆ ಪ್ರಮುಖ ಕಾರಣ ಎಂದು ನಾಯಕರು ತಿಳಿಸಿದ್ದಾರೆ.

ಮೂಲ ಪಕ್ಷದವರಿಗೆ ಪ್ರಣಾಳಿಕೆ ರಚನೆ ಹೊಣೆ ಕೊಡ ಬೇಕಿತ್ತು ಎಂದು ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಈ ಮೂಲಕ ಡಾ.ಕೆ.ಸುಧಾಕರ್ ಅವರಿಗೆ ಪ್ರಣಾಳಿಕೆ ಹೊಣೆ ನೀಡಿದ್ದಕ್ಕೆ ಕೆಲವರ ಅಸಮಧಾನ ಹೊರಹಾಕಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಸಚಿವರನ್ನು ಬಿಟ್ಟು ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ನೀಡಿದ್ದು, ಸಹ ಚುನಾವಣೆ ಸೋಲಿಗೆ ಪ್ರಮುಖ ಕಾರಣವಾಗಿದೆ. ಸ್ಥಳೀಯ ಕ್ಷೇತ್ರಗಳಲ್ಲಿ ಸಚಿವರಾಗಿದ್ದಂತವರಿಗೆ ಮೂಲ ಜಿಲ್ಲೆಗಳ ಉಸ್ತುವಾರಿ ಕೊಡಬೇಕಿತ್ತು. ಅದು ಬಿಟ್ಟು ಬೇರೆ ಯಾವುದೋ ಜಿಲ್ಲೆಗೆ ಉಸ್ತುವಾರಿ ನೀಡಲಾಗಿತ್ತು ಎಂದು ಕೆಲವರು ಬೇಸರ ಹೊರಕಾಕಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಬೇರೆ ಜಿಲ್ಲೆಗಳಿಗೆ ತೆರಳಿ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಿ ಹೋದರೆ ಸಾಕಾಗುತ್ತದೆಯೇ? ಸ್ಥಳೀಯ ಜಿಲ್ಲೆ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಬೇರೆಡೆಯ ಸಚಿವರ ಹಿಡಿತ ಹೇಗೆ ಸಾಧ್ಯ ಆಗುತ್ತದೆ ಎಂದು ಹೈಕಮಾಂಡ್ ನಿರ್ಧಾರಕ್ಕೆ ಕೆಲವರು ಪರೋಕ್ಷ ಬೇಸರ ಹೊರಹಾಕಿದ್ದಾರೆ.

ಅನೇಕ ಶಾಸಕರು ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದು, ಸಚಿವರು ಸರ್ಕಾರ ಇದ್ದಾಗ ಸರಿಯಾಗಿ ಸ್ಪಂದಿಸಲಿಲ್ಲ. ಪಕ್ಷದ ಮುಖಂಡರು ಅಭ್ಯರ್ಥಿಗಳ ಮಾತಿಗೆ ಬೆಲೆ ಕೊಡಲಿಲ್ಲ. ಲಕ್ಷ್ಮಣ ಸವದಿ, ಜಗದೀಶ ಶೆಟ್ಟರ್ ಪಕ್ಷ ಬಿಟ್ಟಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೊಡೆತ ಆಯಿತು. ನಾಯಕರು ಮಾಡಿರುವ ತಪ್ಪಿನಿಂದ ನಾವು ಬಲಿಯಾದೆವು ಎಂದಿದ್ದಾರೆ ಎಂದು ವರದಿಯಾಗಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಅವಲೋಕನ ಸಭೆ ನಡೆದಿದ್ದು, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಬೊಮ್ಮಾಯಿ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಆರ್. ಅಶೋಕ್, ಸಿ.ಸಿ. ಪಾಟೀಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ರಾಜ್ಯ ಬಿಜೆಪಿ ಸಂಘಟನಾ ಕಾರ್ಯದರ್ಶಿ ಜಿ ವಿ ರಾಜೇಶ್, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಉಪಸ್ಥಿತರಿದ್ದರು

Scroll to Top