ಕರಾವಳಿಯಲ್ಲಿ ಸರಣಿ ಕೊಲೆ: ನಳಿನ್ ಕುಮಾರ್ ತಲೆದಂಡ?

ರಾಜ್ಯದಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆ ಪ್ರಕರಣಗಳು ಬಿಜೆಪಿಯ ನೆಮ್ಮದಿಯನ್ನೇ ಕಸಿದುಕೊಂಡಿದೆ. ಹಿಂದುತ್ವಕ್ಕಾಗಿ ತಳಮಟ್ಟದಿಂದ ದುಡಿಯುವ ಕಾರ್ಯಕರ್ತರ ಹತ್ಯೆಯಿಂದ ಸಹಜವಾಗಿಯೇ ಕಾರ್ಯಕರ್ತರ ಆಕ್ರೋಶ ಹೆಚ್ಚಿದೆ.

ಈ ಮಧ್ಯೆ ಹತ್ಯೆ ಪ್ರಕರಣದ ಆರೋಪಿಗಳ ಬಂಧನ ಸೇರಿದಂತೆ ಯಾವುದೇ ವಿಚಾರದಲ್ಲೂ ಶಾಂತಿ ಸುವ್ಯವಸ್ಥೆ ಹಾಗೂ ಕಾನೂನು ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಅದರಲ್ಲೂ ಹಿಂದೂ ಕಾರ್ಯಕರ್ತರನ್ನು ಮುಟ್ಟಿ ನೋಡಿ ಎಂದ ಅಬ್ಬರಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮೇಲಂತೂ ವಿಶೇಷವಾಗಿ ಕರಾವಳಿ ಭಾಗದ ಕಾರ್ಯಕರ್ತರು ಕಿಡಿ ಕಾರುತ್ತಲೇ ಇದ್ದಾರೆ. ಈ ಎಲ್ಲ ಕಾರಣಕ್ಕೆ ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಸಿದ್ಧತೆ ನಡೆಸಿದೆ.

ಪಕ್ಷವನ್ನು ಇನ್ನಷ್ಟು ಸಮರ್ಥವಾಗಿ ಮುನ್ನಡೆಸುವ ನಾಯಕನ ಹೆಗಲಿಗೆ ಪಕ್ಷದ ಹೊಣೆ ಹೊರಿಸಲು ಬಿಜೆಪಿ ಸಿದ್ಧವಾಗಿದೆ.ಇನ್ನೂ ರಾಜ್ಯಾಧ್ಯಕ್ಷೆ ರೇಸ್ ನಲ್ಲಿ ಮಂಗಳೂರಿನ ಪ್ರಭಾವಿ ಶಾಸಕ ಹಾಗೂ ಇಂಧನ ಸಚಿವ ಸುನೀಲ್ ಕುಮಾರ್ ಕೂಡ ರಾಜ್ಯಾಧ್ಯಕ್ಷರ ರೇಸ್ ನಲ್ಲಿದ್ದಾರೆ. ಒಳ್ಳೆಯ ಇಮೇಜ್ ಹಾಗೂ ಖಡಕ್ ಆಡಳಿತದ ಅನುಭವದೊಂದಿಗೆ ಪಕ್ಷವನ್ನು ಮುನ್ನಡೆಸಲು ಸುನೀಲ್ ಕುಮಾರ್ ಆಸಕ್ತರಾಗಿದ್ದಾರಂತೆ. ಆದರೆ ಪಕ್ಷ ಮಾತ್ರ ಬಿಜೆಪಿಯ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಅರವಿಂದ್ ಲಿಂಬಾವಳಿ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಆಯ್ಕೆ‌ಮಾಡಲು ಆಸಕ್ತಿ ಹೊಂದಿದೆ ಎನ್ನಲಾಗಿದೆ. ಈಗಾಗಲೇ ಅಮಿತ್ ಶಾ ಎದುರು ರಾಜ್ಯಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಲಿಂಬಾವಳಿ ಮುಂದಿನ ರಾಜ್ಯಾಧ್ಯಕ್ಷರಾಗಲಿದ್ದಾರೆ ಎನ್ನಲಾಗಿದೆ.ಆದರೆ ಸದ್ಯಕ್ಕೆ ಇದನ್ನು ಬಹಿರಂಗ ಪಡಿಸಲು ಬಿಜೆಪಿ ಸಿದ್ಧವಿಲ್ಲ.

ಅಮಿತ್ ಶಾ ಬಂದು ರಾಜ್ಯಾಧ್ಯಕ್ಷರನ್ನು ಬದಲಾಯಿಸಿ ಹೋದರು ಎಂಬ ಹಣೆಪಟ್ಟಿ ಯಿಂದ ತಪ್ಪಿಸಿಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯನ್ನು ಈಗ ಅನೌನ್ಸ್ ಮಾಡಲು ಸಿದ್ಧವಿಲ್ಲ. ಅದೇ ಕಾರಣಕ್ಕೆ ಬಿಜೆಪಿ ಗುರುವಾರ ಪತ್ರಿಕಾ ಪ್ರಕರಣೆ ಹೊರಡಿಸಿದ್ದು, ಯಾವುದೇ ಕಾರಣಕ್ಕೂ ರಾಜ್ಯಾಧ್ಯಕ್ಷರ ಬದಲಾವಣೆ ಇಲ್ಲ ಎನ್ನುವ ಮೂಲಕ ವದಂತಿಗಳಿಗೆ ಅಂತ್ಯ ಹಾಡುವ ಪ್ರಯತ್ನ ಮಾಡಿದೆ. ಆದರೆ ಇನ್ನೊಂದು ವಾರದಲ್ಲಿ ನೂತನ ರಾಜ್ಯಾಧ್ಯಕ್ಷರ ಘೋಷಣೆ ಖಚಿತ ಎಂಬ ಮಾಹಿತಿಯನ್ನು ಬಿಜೆಪಿಯ ಹಿರಿಯ ಮೂಲಗಳೇ ಧೃಡಪಡಿಸಿವೆ.

Scroll to Top