ವಿಶ್ವ ಸುಂದರಿ ಸ್ಪರ್ಧೆಯನ್ನು ಈ ಬಾರಿ ಭಾರತದಲ್ಲಿ ಆಯೋಜನೆ ಮಾಡಲಾಗುತ್ತಿದೆ. ಬರೋಬ್ಬರಿ 27 ವರ್ಷಗಳ ಬಳಿಕ ಭಾರತವು ಇಂಥದ್ದೊಂದು ಅವಕಾಶ ಪಡೆದಿದೆ. ನಿನ್ನೆ ನಡೆದ ಸಭೆಯಲ್ಲಿ ಈ ಬಾರಿ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತ ಆತಿಥ್ಯ ವಹಿಸಿಕೊಳ್ಳಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜನೆ ಮಾಡಲು ಹಲವು ರಾಷ್ಟ್ರಗಳು ತುದಿಗಾಲಲ್ಲಿ ನಿಂತಿರುತ್ತವೆ. ಅದೊಂದು ಪ್ರತಿಷ್ಠಿತ ಸ್ಪರ್ಧೆ ಆಗಿರುವುದರಿಂದ ಆತಿಥ್ಯ ವಹಿಸಲು ಸಹಜವಾಗಿಯೇ ಪೈಪೋಟಿ ನಡೆದಿರುತ್ತದೆ. ಈ ಎಲ್ಲ ಪೈಪೋಟಿಯಾಚೆ ಈ ಬಾರಿ ಭಾರತದಲ್ಲಿ ಸ್ಪರ್ಧೆ ನಡೆಯಲಿದೆ.
ಎರಡನೇ ಬಾರಿ ಭಾರತದಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆಯುತ್ತಿದ್ದು, ಮೊದಲ ಬಾರಿಗೆ ಬೆಂಗಳೂರಿನಲ್ಲಿ ನಡೆದಿತ್ತು ಎನ್ನುವುದು ವಿಶೇಷ. 1996ರಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತ ಆತಿಥ್ಯ ವಹಿಸಿಕೊಂಡಿತ್ತು. ಆ ಸ್ಪರ್ಧೆಯು ಬೆಂಗಳೂರಿನಲ್ಲಿ ಆಯೋಜನೆಗೊಂಡಿತ್ತು. ಅಮಿತಾಭ್ ಬಚ್ಚನ್ ಅದರ ನೇತೃತ್ವ ವಹಿಸಿಕೊಂಡಿದ್ದರು.
ಬೆಂಗಳೂರಿನಲ್ಲಿ ವಿಶ್ವ ಸುಂದರಿ ಸ್ಪರ್ಧೆ ನಡೆದಾಗ ಭಾರೀ ಪ್ರತಿರೋಧ ವ್ಯಕ್ತವಾಯಿತು. ಇದರ ವಿರುದ್ಧ ಮಹಿಳಾ ಸಂಘಟನೆಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದವು. ಆಗ ಮುಖ್ಯಮಂತ್ರಿಗಳಾಗಿ ಜೆ.ಎಚ್. ಪಟೇಲ್ ಅವರು ಅಧಿಕಾರ ವಹಿಸಿದ್ದರು. ಪ್ರತಿಭಟನೆ ಎಷ್ಟೇ ಜೋರಾಗಿದ್ದರೂ, ಪೊಲೀಸ್ ಭದ್ರತೆಯಲ್ಲಿ ಕಾರ್ಯಕ್ರಮ ನಡೆಸಲು ಪಟೇಲ್ ಸೂಚಿಸಿದ್ದರು. ಈ ವೇಳೆಯಲ್ಲಿ ಅಮಿತಾಭ್ ವಿರುದ್ಧವೂ ಪ್ರಕರಣ ದಾಖಲಾಗಿತ್ತು. ಆಗ ನಟ ಅಂಬರೀಶ್ ಅವರು ಅಮಿತಾಭ್ ನೆರವಿಗೆ ಧಾವಿಸಿದ್ದರು.
ವಿಶ್ವಸುಂದರಿ ಸ್ಪರ್ಧೆಯು ಒಂದು ತಿಂಗಳುಗಳ ಕಾಲ ನಡೆಯಲಿದ್ದು, ಈ ಬಾರಿ ಯಾವ ರಾಜ್ಯದಲ್ಲಿ ಇದನ್ನು ಆಯೋಜನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿಲ್ಲ. ಆಯೋಜಕರು ಮುಂದಿನ ದಿನಗಳಲ್ಲಿ ತಿಳಿಸಬಹುದು. ಅಂದಹಾಗೆ ಈ ಬಾರಿ ಭಾರತದಿಂದ ನಂದಿತಾ ಗುಪ್ತಾ ಸೇರಿದಂತೆ ಹಲವರು ಸ್ಪರ್ಧೆಗೆ ಇಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ.