(ಜೂ.11-12) ಕಾಪು ಮಾರಿಯಮ್ಮ, ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ

ಕಾಪು: ಸುಮಾರು ಮೂವತ್ತೈದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ಜೀರ್ಣೋದ್ಧಾರದ ಪ್ರಯುಕ್ತ ಶ್ರೀ ಮಾರಿಯಮ್ಮ ಮತ್ತು ಶ್ರೀ ಉಚ್ಛಂಗಿ ದೇವಿ ಗದ್ದುಗೆಯ ತಾತ್ಕಾಲಿಕ ಗುಡಿಗೆ ಸಾನಿಧ್ಯ ಚಲನೆ ಧಾರ್ಮಿಕ ಕಾರ್ಯಕ್ರಮವು ಜೂ. 11 ಮತ್ತು 12 ರಂದು ನಡೆಯಲಿದೆ ಎಂದು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ತಿಳಿಸಿದರು.

ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶುಕ್ರವಾರ ಜರಗಿದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮೊದಲ ಹಂತದ ಕಾಮಗಾರಿಗೆ ಅನುಗುಣವಾಗಿ ಅಗ್ರಸಭೆ, ಮುಖ ಮಂಟಪ ನಿರ್ಮಾಣವಾಗಬೇಕಿದ್ದು, ಅದಕ್ಕೆ ಪೂರ್ವಭಾವಿಯಾಗಿ ಪ್ರಸ್ತುತ ಇರುವ ಮಾರಿಯಮ್ಮ ಗುಡಿ ಮತ್ತು ಉಚ್ಚಂಗಿ ಗುಡಿಗಳನ್ನು ವಿಸರ್ಜಿಸಬೇಕಾಗಿದೆ. ಈ ಉದ್ದೇಶದಿಂದ ಅಮ್ಮನ ಅಭಯ ನುಡಿ ಮತ್ತು ಪ್ರಾಜ್ಞರ ಪ್ರಶ್ನಾ ಚಿಂತನೆಯಂತೆ ತಾತ್ಕಾಲಿಕ ಗುಡಿಗಳನ್ನು ನಿರ್ಮಿಸಲಾಗಿದ್ದು ಜೂ. 11ರಂದು ಬೆಳಿಗ್ಗೆ ಗಂಟೆ 8 ರಿಂದ ಚಂಡಿಕಾಯಾಗ ಪ್ರಾರಂಭಗೊಂಡು, 11 ಕ್ಕೆ ಪೂರ್ಣಾಹುತಿ, ಪ್ರಸಾದ ವಿತರಣೆ ನಡೆಯಲಿದೆ.

ಜೂ. 12ರಂದು ಅಮ್ಮನ ಗದ್ದುಗೆ ಸಾನ್ನಿಧ್ಯ ಚಲನೆ ನಡೆಯಲಿದ್ದು ಬೆಳಿಗ್ಗೆ ಗಂಟೆ 7 ರಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದು 8.30 ಕ್ಕೆ ನೂತನ ತಾತ್ಕಾಲಿಕ ಗುಡಿಯಲ್ಲಿ ಸಾನಿಧ್ಯ ಪ್ರತಿಷ್ಠೆ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಜ್ಯೋತಿರ್ವಿದ್ವಾನ್ ಕೆ.ಜಿ. ರಾಘವೇಂದ್ರ ತಂತ್ರಿ ಕೊರಂಗ್ರಪಾಡಿ, ಜ್ಯೋತಿರ್ವಿದ್ವಾನ್ ಕೆ.ಪಿ. ಕುಮಾರಗುರು ತಂತ್ರಿ ಕೊರಂಗ್ರಪಾಡಿ ನೇತೃತ್ವದಲ್ಲಿ ಪ್ರಧಾನ ಅರ್ಚಕ ವೇ| ಮೂ| ಶ್ರೀನಿವಾಸ ತಂತ್ರಿ ಅವರ ಸಹಕಾರದೊಂದಿಗೆ ಚಂಡಿಕಾಯಾಗ, ಸಾನಿಧ್ಯ ಚಲನೆ, ಮತ್ತು ಸಾನಿಧ್ಯ ಪ್ರತಿಷ್ಠಾಪೂರ್ವಕ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಬೆಳಿಗ್ಗೆ 10 ಗಂಟೆಗೆ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟ್ಟಿ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಉಡುಪಿ ಜಿಲ್ಲಾಧಿಕಾರಿ ಡಾ| ಕೂರ್ಮಾ ರಾವ್ ಎಂ. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಲಾಲಾಜಿ ಆರ್. ಮೆಂಡನ್, ಸಮಿತಿ ಮುಖಂಡರಾದ ಸರ್ವೋತ್ತಮ ಶೆಟ್ಟಿ ಅಬುದಾಭಿ, ಮಲ್ಲಾರು ಶಶಿಧರ್ ಶೆಟ್ಟಿ ಮಸ್ಕತ್, ಮೂಳೂರು ಸುಧಾಕರ ಹೆಗ್ಡೆ ಮುಂಬಯಿ, ರವಿ ಸುಂದರ್ ಶೆಟ್ಟಿ ಮುಂಬಯಿ, ಸಂತೋಷ್ ಶೆಟ್ಟಿ ಇನ್ನಾ ಬಾಳಿಕೆ ಕುರ್ಕಿಲಬೆಟ್ಟು, ಉಪೇಂದ್ರ ಶೆಟ್ಟಿ ಬೆಂಗಳೂರು, ವಿವಿಧ ಸಮಾಜದ ಗಣ್ಯರಾದ ಎಂ.ಬಿ. ಪುರಾಣಿಕ್, ಆನಂದ್ ಎಂ. ಶೆಟ್ಟಿ, ಡಾ| ಜಿ. ಶಂಕರ್, ಬಿ.ಎನ್. ಶಂಕರ ಪೂಜಾರಿ, ಧರ್ಮಪಾಲ್ ಯು. ದೇವಾಡಿಗ, ಗಂಗಾಧರ ಆಚಾರ್ಯ, ರಾಮದಾಸ್ ಶೆಟ್ಟಿಗಾರ್, ಗೋಕುಲ್‌ದಾಸ್ ಬಾರ್ಕೂರು, ಜಯ ರಾಣ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

Scroll to Top