ಮಂಗಳೂರು: ರಾಜ್ಯದ ಕರಾವಳಿಯಲ್ಲಿ ಬಿಪರ್ಜೋಯ್ ಚಂಡಮಾರುತದ ಪರಿಣಾಮ ಕಡಲ ತೀರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳಗ್ಗೆಯಿಂದಲೇ ಮಳೆಯಾಗಿದ್ದು, ಪ್ರಕ್ಷುಬ್ಧಗೊಂಡಿದೆ. ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸಮುದ್ರ ತೀರಕ್ಕೆ ಜನರು ಹೋಗದಂತೆ ಎಚ್ಚರಿಕೆ ನೀಡಿದೆ. ಮುಂದಿನ 48 ಗಂಟೆಗಳ ಕಾಲ ಗಂಟೆಗೆ 40-50ಕೀಮೀ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಪರಿಸ್ಥಿತಿಯನ್ನು ಎದುರಿಸಲು ಸಹಾಯವಾಣಿಯನ್ನು ಕೂಡ ಜಿಲ್ಲಾಡಳಿತ ತೆರೆದಿದೆ.
ಕಡಲ ತೀರಕ್ಕೆ ಹೋಗದಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದರೂ ಕಡಲ ತೀರದಲ್ಲಿ ಪ್ರವಾಸಿಗರ ಹುಚ್ಚಾಟ ಮುಂದುವರಿದಿದೆ. ಕಡಲ ಅಬ್ಬರದ ಜೊತೆ ಫೋಟೋಗೆ ಫೋಸ್ ಕೊಡುತ್ತಿದ್ದ ಯುವತಿಯರ ಮೇಲೇಯೇ ರಕ್ಕಸ ಗಾತ್ರದ ಅಲೆ ಅಪ್ಪಳಿಸಿದೆ. ಅಲೆಯ ಅಬ್ಬರಕ್ಕೆ ಯುವತಿಯರು ಒಂದು ಕ್ಷಣ ತಬ್ಬಿಬ್ಬಾಗಿದ್ದಾರೆ. ಕೊನೆಗೆ ಯುವತಿಯರನ್ನು ದಡದಿಂದ ಜಾಗ ಖಾಲಿ ಮಾಡುವಂತೆ ಪೊಲೀಸರು ಸೂಚಿಸಿದ್ದಾರೆ.
ಒಟ್ಟಿನಲ್ಲಿ ರಾಜ್ಯ ಕರಾವಳಿಗೆ ಮುಂಗಾರು ಮಳೆ ಎಂಟ್ರಿ ಕೊಟ್ಟಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಮಳೆ ಆರಂಭಗೊಂಡಿದೆ. ಮಂಗಳೂರು ನಗರ ಸೇರಿದಂತೆ ಜಿಲ್ಲಾದ್ಯಂತ ಮಳೆಯಾಗಿದೆ. ಈ ಮೂಲಕ ನೀರಿನ ಅಭಾವ ಎದುರಿಸುತ್ತಿದ್ದ ಜಿಲ್ಲೆಯ ಜನತೆಗೆ ಖುಷಿ ತಂದಿದೆ..