ಕಾರವಾರ ಅರಬ್ಬಿ ಸಮುದ್ರದಲ್ಲಿ ಏಕಕಾಲಕ್ಕೆ 35 ಯುದ್ಧ ವಿಮಾನಗಳ ಹಾರಾಟ : INS ವಿಕ್ರಮಾದಿತ್ಯ, INS ವಿಕ್ರಾಂತ್ ಸಾಮರ್ಥ್ಯ ಪ್ರದರ್ಶನ

ಕಾರವಾರ: ಏಷ್ಯಾದ ಅತಿದೊಡ್ಡ ನೌಕಾನೆಲೆ ಎಂದೇ ಗುರುತಿಸಿಕೊಂಡಿರುವ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆ ಇದೀಗ ಭಾರತದ ನೌಕಾಪಡೆಯ ಸಾಮರ್ಥ್ಯವನ್ನ ದುಪ್ಪಟ್ಟು ಮಾಡಿದ ಕೀರ್ತಿಗೂ ಪಾತ್ರವಾಗಿದೆ.


ಕಾರವಾರದ ಅರಬ್ಬಿ ಸಮುದ್ರದ ನೌಕಾನೆಲೆಯಲ್ಲಿ ಶನಿವಾರ ಯುದ್ಧ ವಿಮಾನವಾಹಕ ನೌಕೆಯಾದ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್ ಹಡಗುಗಳ ಶಕ್ತಿ ಸಾಮರ್ಥ್ಯ ಪರೀಕ್ಷಿಸಲಾಯಿತು.


ಭಾರತೀಯ ನೌಕಾಪಡೆಯ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್ ವಿಮಾನವಾಹಕ ಹಡಗಿನಲ್ಲಿ 35ಕ್ಕೂ ಹೆಚ್ಚು ಯುದ್ಧ ವಿಮಾನಗಳು ಯಶಸ್ವಿಯಾಗಿ ಹಾರಾಟ ನಡೆಸಿದವು. ವಿಕ್ರಮಾದಿತ್ಯ ಹಾಗೂ ವಿಕ್ರಾಂತ್ ಹಡಗಿನಲ್ಲಿ ಲ್ಯಾಂಡಿಂಗ್ ಆಗುವ ಮೂಲಕ ತಡೆರಹಿತ ಯುದ್ಧ ವಾಹಕದ ಪರೀಕ್ಷೆಯನ್ನು ನೌಕಾದಳ ಯಶಸ್ವಿಗೊಳಿಸಿತು.

ಕಾರವಾರ ಅರಬ್ಬಿ ಸಮುದ್ರದಲ್ಲಿ ಯುದ್ಧ ವಾಹಕ ಹಡಗಿನಲ್ಲಿ MiG-29K ಫೈಟರ್ ಜೆಟ್‌ಗಳು, MH60R, Kamov, ಸೀ ಕಿಂಗ್, ಚೇತಕ್ ಮತ್ತು ALH ಹೆಲಿಕಾಪ್ಟರ್‌ಗಳು ಸೇರಿದಂತೆ ವ್ಯಾಪಕ ಶ್ರೇಣಿಯ ಯುದ್ಧ ವಿಮಾನಗಳ ಹಾರಾಟ ಪರೀಕ್ಷಗೆ ವಿಕ್ರಾಂತ್‌ ಹಾಗೂ ವಿಕ್ರಮಾದಿತ್ಯ ಅವಕಾಶ ಕಲ್ಪಿಸಿಕೊಟ್ಟು, ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿತು.


ಕದಂಬ ನೌಕಾನೆಲೆಯಲ್ಲಿ ಸ್ಥಾನ ಪಡೆದಿರುವ INS ವಿಕ್ರಮಾದಿತ್ಯ ಹಾಗೂ INS ವಿಕ್ರಾಂತ್ ಹಡಗು ಮತ್ತೊಮ್ಮೆ ಯುದ್ಧ ಸನ್ನದ್ಧತೆಗೆ ಸಿದ್ದವಾಗಿದೆ. ಶನಿವಾರ ನಡೆದ ಸಾಮರ್ಥ್ಯ ಪರೀಕ್ಷೆ ಯಶಸ್ವಿಯಾಗಿದ್ದು, ಈ ಮೂಲಕ ಸಮುದ್ರ ಭಾಗದ ಗಡಿಯನ್ನು ಕಾಯಲು ಹಾಗೂ ಶತ್ರು ರಾಷ್ಟ್ರದ ದಾಳಿಯನ್ನು ಎರಡೂ ವಿಮಾನವಾಹಕಗಳು ಏಕ ಕಾಲದಲ್ಲಿ ಎದುರಿಸಬಲ್ಲ ವಿಶ್ವಾಸ ಮೂಡಿಸಿವೆ.

2025ಕ್ಕೆ ದೇಶಕ್ಕೆ ಸಮರ್ಪಣೆ


ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿ ಕದಂಬ ನೌಕಾನೆಲೆಯು ಏಷ್ಯಾದಲ್ಲೇ ಅತೀ ದೊಡ್ಡ ನೌಕಾನೆಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಲ್ಲಿನ ಭೂ ಪ್ರದೇಶ ವೈರಿಗಳಿಗೆ ಚಿತ್ತ ಕಾಣದಂತೆ ಮಾಡಿ ಶತ್ರುಗಳ ಮೇಲೆ ಮುಗಿಬೀಳಲು ಸುವ್ಯವಸ್ಥಿತ ನೌಕಾ ತಾಣವಾಗಿ ಮಾರ್ಪಡುತಿದ್ದು ಇದೀಗ ನೌಕಾ ನೆಲೆಯಲ್ಲಿ ಎರಡನೇ ಹಂತದ ಕಾಮಗಾರಿಗಳು ಮುಕ್ತಾಯದ ಹಂತ ತಲುಪಿದೆ. ಒಂದು ಲಕ್ಷ ಸಿಬ್ಬಂದಿಗೆ ವಸತಿ ನಿಲಯ ,ಕಚೇರಿ ಸಂಕೀರ್ಣ, ರಿಪೇರಿ ಯಾರ್ಡ್‌ಗಳು ಈಗಾಗಲೇ ನಿರ್ಮಾಣದ ಅಂತಿಮ ಹಂತ ತಲುಪಿದ್ದು ನೌಕಾ ದಳದ ಮಾಹಿತಿ ಪ್ರಕಾರ 2025ರ ವೇಳೆಗೆ ದೇಶಕ್ಕೆ ಸಮರ್ಪಣೆಗೊಳ್ಳಲಿದೆ.

Scroll to Top